West Bengal SIR | ಮತದಾರರ ಪಟ್ಟಿಯಿಂದ ಕೈಬಿಟ್ಟ 27 ಲಕ್ಷ ಮತದಾರರಲ್ಲಿ ಶೇ. 70 ಮುಸ್ಲಿಮರು; ಶೇ. 51 ಮಹಿಳೆಯರು: ವರದಿ

ಕೋಲ್ಕತ್ತಾ, ಜು. 15: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (S I R) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಮೂಲದ ಸಂಶೋಧನಾ ಸಂಸ್ಥೆ ಸಬರ್ ನಡೆಸಿರುವ ವಿಶ್ಲೇಷಣೆಯಲ್ಲಿ, ಮತದಾರರ ಪಟ್ಟಿಯಿಂದ ಕೈಬಿಟ್ಟ 27 ಲಕ್ಷಕ್ಕೂ ಹೆಚ್ಚು ಮತದಾರರ ಪೈಕಿ ಸುಮಾರು ಶೇ.70 ಮಂದಿ ಮುಸ್ಲಿಮರು ಎಂದು ತಿಳಿಸಲಾಗಿದೆ.
ಈ ವರ್ಗದ ಮತದಾರರಲ್ಲಿ ಶೇ.51 ಮಂದಿ ಮಹಿಳೆಯರಾಗಿದ್ದಾರೆ ಎಂದು ಸಂಸ್ಥೆ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ವಿಶ್ಲೇಷಣೆಯಲ್ಲಿ ತಿಳಿಸಿದೆ. ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಂಡುಬಂದ ತಾರ್ಕಿಕ ವ್ಯತ್ಯಾಸಗಳ ಆಧಾರದ ಮೇಲೆ ಈ ಮತದಾರರನ್ನು ಗುರುತಿಸಿ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಸಬರ್ ಸಂಸ್ಥೆಯ ಪ್ರಕಾರ, ತಾರ್ಕಿಕ ವ್ಯತ್ಯಾಸಗಳೆಂದರೆ ಪೋಷಕರ ಹೆಸರುಗಳಲ್ಲಿನ ಹೊಂದಾಣಿಕೆಯ ಕೊರತೆ, ಪೋಷಕರು ಮತ್ತು ಮಕ್ಕಳ ನಡುವಿನ ಅಸಹಜವಾಗಿ ಕಡಿಮೆ ವಯೋಮಾನದ ಅಂತರ ಹಾಗೂ ಒಂದೇ ಕುಟುಂಬದಲ್ಲಿ ಆರಕ್ಕಿಂತ ಹೆಚ್ಚು ಮಕ್ಕಳಿರುವ ದಾಖಲೆಗಳು ಸೇರಿವೆ.
ಪಶ್ಚಿಮ ಬಂಗಾಳದಲ್ಲಿ ಫೆಬ್ರವರಿಯಲ್ಲಿ ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಿಂದ ಆರಂಭಿಕ ಹಂತದಲ್ಲೇ 61 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು. ಬಳಿಕ ಪೂರಕ ಪಟ್ಟಿಗಳನ್ನು ಪ್ರಕಟಿಸಲಾಗಿದ್ದು, ಸುಮಾರು 60 ಲಕ್ಷ 'ಸಂಶಯಾಸ್ಪದ' ಮತ್ತು 'ಬಾಕಿ' ಪ್ರಕರಣಗಳ ಪರಿಶೀಲನೆ ಹಾಗೂ ತೀರ್ಪು ನೀಡುವ ಪ್ರಕ್ರಿಯೆ ಮುಂದುವರಿಯಿತು.
ಎಪ್ರಿಲ್ 6ರ ವೇಳೆಗೆ, ಪರಿಷ್ಕರಣೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ರಾಜ್ಯದ ಒಟ್ಟು ಮತದಾರರಲ್ಲಿ ಸುಮಾರು ಶೇ.11.9ರಷ್ಟಿದ್ದ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.
ವಿಧಾನಸಭೆ ಚುನಾವಣೆಗೆ ಮುನ್ನ ಮೇಲ್ಮನವಿ ನ್ಯಾಯಮಂಡಳಿಗಳ ಮುಂದೆ ಸುಮಾರು 34 ಲಕ್ಷ ಮೇಲ್ಮನವಿಗಳು ಬಾಕಿ ಉಳಿದಿವೆ ಎಂದು ವರದಿಯಾಗಿದೆ. ಇವುಗಳಲ್ಲಿ 27 ಲಕ್ಷ ಮೇಲ್ಮನವಿಗಳನ್ನು ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟ ವ್ಯಕ್ತಿಗಳೇ ಸಲ್ಲಿಸಿದ್ದಾರೆ.
ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ರಚಿಸಲಾದ ನ್ಯಾಯಮಂಡಳಿಗಳು ಇದುವರೆಗೆ 1,607 ಹೆಸರುಗಳನ್ನು ಮರು ಮತದಾರರ ಪಟ್ಟಿಗೆ ಸೇರಿಸಲು ಅನುಮತಿ ನೀಡಿವೆ.






