KOLKATA - S I R ಪ್ರಕ್ರಿಯೆ | ‘ತಾರ್ಕಿಕ ವ್ಯತ್ಯಾಸ’ ವರ್ಗದಲ್ಲಿ ಮುಸ್ಲಿಂ ಮತದಾರರ ಪಾಲು ಅಧಿಕ; ಅಧ್ಯಯನ ವರದಿ

Photo| PTI
ಕೋಲ್ಕತ್ತಾ, ಫೆ.15: ಚುನಾವಣಾ ಆಯೋಗ (EC) ಕೈಗೊಂಡ ವಿಶೇಷ ತೀವ್ರ ಪರಿಷ್ಕರಣೆ (S I R) ಪ್ರಕ್ರಿಯೆಗೆ ಸಂಬಂಧಿಸಿದ ಅಧ್ಯಯನವೊಂದು ದಕ್ಷಿಣ ಕೋಲ್ಕತ್ತಾದ ರಾಜಕೀಯವಾಗಿ ಮಹತ್ವದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ “ತಾರ್ಕಿಕ ವ್ಯತ್ಯಾಸ”ದಡಿ ಗುರುತಿಸಲಾದ ಮತದಾರರಲ್ಲಿ ಮುಸ್ಲಿಂ ಸಮುದಾಯದ ಪಾಲು ಅಸಮಾನವಾಗಿ ಹೆಚ್ಚಾಗಿದೆ ಎಂದು ತಿಳಿಸಿದೆ.
ಈ ಅಂಕಿಅಂಶಗಳು S I R ಪ್ರಕ್ರಿಯೆಯ ನಿಷ್ಪಕ್ಷಪಾತತೆಯ ಕುರಿತ ಚರ್ಚೆಗೆ ಹೊಸ ಆಯಾಮ ನೀಡಿವೆ.
ಸಬರ್ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ, ನಗರದ ಸಾಂಪ್ರದಾಯಿಕ ವಾಣಿಜ್ಯ ಹಾಗೂ ರಾಜಕೀಯ ಕೇಂದ್ರದ ಸುತ್ತಲಿನ ಮಧ್ಯ–ದಕ್ಷಿಣ ಭಾಗದಲ್ಲಿರುವ ಭೋವಾನಿಪೋರ್ ವಿಧಾನಸಭಾ ಕ್ಷೇತ್ರದಲ್ಲಿ “ತಾರ್ಕಿಕ ವ್ಯತ್ಯಾಸ” ಹೊಂದಿದ ಮತದಾರ ಪೈಕಿ ಮುಸ್ಲಿಮರು ಸುಮಾರು ಶೇ.52 ಇದ್ದಾರೆ. ದಕ್ಷಿಣ ಕೋಲ್ಕತ್ತಾದ ಪಕ್ಕದ ಉನ್ನತ ವಸತಿ ಪ್ರದೇಶವಾದ ಬ್ಯಾಲಿಗುಂಜ್ ಕ್ಷೇತ್ರದಲ್ಲಿ ಈ ಪ್ರಮಾಣವು ಶೇ.78 ಏರಿದೆ.
ಭೋವಾನಿಪೋರ್ ಕ್ಷೇತ್ರದಲ್ಲಿ “ತಾರ್ಕಿಕ ವ್ಯತ್ಯಾಸ” ವರ್ಗದಡಿ ಗುರುತಿಸಲಾದ 15,145 ಮತದಾರರಲ್ಲಿ 7,846 ಮಂದಿ ಮುಸ್ಲಿಮರು ಎಂದು ಅಧ್ಯಯನ ಹೇಳಿದೆ. ಬ್ಯಾಲಿಗುಂಜ್ ಕ್ಷೇತ್ರದಲ್ಲಿ ಇದೇ ವರ್ಗದ 30,008 ಮತದಾರರಲ್ಲಿ 23,256 ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ವರದಿ ಉಲ್ಲೇಖಿಸಿದೆ.
ಇತರ ವರ್ಗಗಳ ಅಳಿಸುವಿಕೆ ಅಥವಾ ತಿದ್ದುಪಡಿ ಅಂಕಿಅಂಶಗಳೊಂದಿಗೆ ಹೋಲಿಸಿದಾಗ ಈ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಅಧ್ಯಯನದಲ್ಲಿ ಭಾಗವಹಿಸಿದ್ದ ಅಶಿನ್ ಚಕ್ರವರ್ತಿ, ಸುಪ್ತಿಕ್ ಹಾಲ್ದರ್ ಹಾಗೂ ಸಬೀರ್ ಅಹಮದ್ ಅವರ ಪ್ರಕಾರ, ಭೋವಾನಿಪೋರ್ ಕ್ಷೇತ್ರದಲ್ಲಿ ‘ಗೈರು , ಸ್ಥಳಾಂತರ ಅಥವಾ ಮೃತಪಟ್ಟಿರುವ/ನಕಲು’ (SSD) ವರ್ಗದಡಿ ಗುರುತಿಸಲಾದ ಮತದಾರರಲ್ಲಿ ಮುಸ್ಲಿಮರ ಪಾಲು ಕೇವಲ ಶೇ.22.7 ಮತ್ತು ಮ್ಯಾಪ್ ಮಾಡದ ಮತದಾರ ಪೈಕಿ ಸುಮಾರು ಶೇ.26 ಮಾತ್ರ. ಇದು 2011ರ ಜನಗಣತಿ ಪ್ರಕಾರ ಕ್ಷೇತ್ರದ ಸುಮಾರು ಶೇ.20 ಮುಸ್ಲಿಂ ಜನಸಂಖ್ಯೆಯೊಂದಿಗೆ ಹೊಂದಿಕೆಯಾಗುತ್ತದೆ. ಆದರೆ ‘ತಾರ್ಕಿಕ ವ್ಯತ್ಯಾಸ’ ವರ್ಗದಲ್ಲಿ ಈ ಪ್ರಮಾಣ ಶೇ.52ಕ್ಕೆ ಏರಿರುವುದು ಗಮನಾರ್ಹ ಎಂದು ತಿಳಿಸಿದ್ದಾರೆ.
ಬ್ಯಾಲಿಗುಂಜ್ ಕ್ಷೇತ್ರದಲ್ಲಿಯೂ ಇದೇ ರೀತಿಯ ಮಾದರಿ ಕಂಡುಬಂದಿದ್ದು, ಅಲ್ಲಿ ಮುಸ್ಲಿಮರು SSD ಮತದಾರರಲ್ಲಿ ಸುಮಾರು ಶೇ.44 ಮತ್ತು ಮ್ಯಾಪ್ ಮಾಡದ ಮತದಾರರಲ್ಲಿ ಶೇ.42 ಮಂದಿ ಇದ್ದಾರೆ. ಇದು ಕ್ಷೇತ್ರದ ಅಂದಾಜು ಶೇ.50 ಜನಸಂಖ್ಯೆ ಪಾಲಿನೊಂದಿಗೆ ಹೋಲಿಕೆಯಾಗುತ್ತದೆ ಎಂದು ಅಧ್ಯಯನ ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಅಧಿಕಾರಿಗಳು ಪಕ್ಷಪಾತದ ಆರೋಪಗಳನ್ನು ತಳ್ಳಿ ಹಾಕಿದ್ದು, ಮತದಾರರ ಪಟ್ಟಿಯಲ್ಲಿ ಧರ್ಮದ ವಿವರಗಳನ್ನು ದಾಖಲಿಸುವುದಿಲ್ಲ ಹಾಗೂ ಧರ್ಮವಾರು ಅಂಕಿಅಂಶಗಳನ್ನು ಸಂಗ್ರಹಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ವಲಯದಲ್ಲಿ ಈ ವರದಿಗೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ರಾಜಕೀಯ ವಿಶ್ಲೇಷಕ ಉದಯನ್ ಬಂಡೋಪಾಧ್ಯಾಯ ಅವರು SIR ಪ್ರಕ್ರಿಯೆಯಲ್ಲಿ ಬಳಸಲಾದ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯನ್ನು ಅಲ್ಪಸಂಖ್ಯಾತ ಮತದಾರರಿಗೆ, ವಿಶೇಷವಾಗಿ ಮಹಿಳೆಯರಿಗೆ ಕಿರುಕುಳ ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಬಿಜೆಪಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.
ಈ ಅಧ್ಯಯನದ ಕಂಡುಬಂದ ಅಂಶಗಳು ಕೋಲ್ಕತ್ತಾದ S I R ಪ್ರಕ್ರಿಯೆಗೆ ಹೊಸ ವಿವಾದದ ಪದರವನ್ನು ಸೇರಿಸಿದ್ದು, ಸಾಫ್ಟ್ ವೇರ್ ಆಧಾರಿತ “ತಾರ್ಕಿಕ ವ್ಯತ್ಯಾಸ” ಶೋಧಕದ ಕುರಿತು ಸ್ವತಂತ್ರ ಆಡಿಟ್ ನಡೆಸಬೇಕೆಂಬ ಬೇಡಿಕೆಗಳು ಹೆಚ್ಚುತ್ತಿವೆ. ಯಾವುದೇ ಸಮುದಾಯದ ಮೇಲೆ ಅಸಮಾನ ಪರಿಣಾಮ ಬೀರುವಂತಾಗದಂತೆ ಪರಿಷ್ಕರಣೆ ಕ್ರಮಗಳನ್ನು ಪಾರದರ್ಶಕಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.






