ಮುಜಫರ್ನಗರದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಪ್ರಕರಣ | ಶಾಲಾ ಶಿಕ್ಷಣ ಮುಗಿಯುವವರೆಗೆ ಶೈಕ್ಷಣಿಕ ವೆಚ್ಚ ಭರಿಸಿ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

PC : X
ಹೊಸದಿಲ್ಲಿ: 2023 ರಲ್ಲಿ ಮುಜಫರ್ ನಗರದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ, ಸಂತ್ರಸ್ತ ಅಪ್ರಾಪ್ತ ಮುಸ್ಲಿಂ ಬಾಲಕನ ಶೈಕ್ಷಣಿಕ ವೆಚ್ಚವನ್ನು ಭರಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನ್ಯಾಯಮೂರ್ತಿ ಅಭಯ್ ಎಸ್. ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ವಿಚಾರಣೆಯ ಸಂದರ್ಭ, ಸಂತ್ರಸ್ತ ವಿದ್ಯಾರ್ಥಿಯ ಶಾಲಾ ಶಿಕ್ಷಣ ಮುಗಿಯುವವರೆಗೆ ಬೋಧನಾ ಶುಲ್ಕ, ಸಮವಸ್ತ್ರ, ಪುಸ್ತಕಗಳು ಮತ್ತು ಸಾರಿಗೆ ಶುಲ್ಕವನ್ನು ರಾಜ್ಯ ಸರಕಾರವು ಪಾವತಿಸಬೇಕು ಎಂದು ಪುನರುಚ್ಛರಿಸಿದೆ ಎಂದು livelaw.in ವರದಿ ಮಾಡಿದೆ.
“ನಮ್ಮ ಹಿಂದಿನ ಆದೇಶಗಳಲ್ಲಿ ಸೂಚಿಸಿದಂತೆ, ಮಗುವಿನ ಶಾಲಾ ಶಿಕ್ಷಣ ಮುಗಿಯುವವರೆಗೆ ಬೋಧನಾ ಶುಲ್ಕ, ಸಮವಸ್ತ್ರದ ವೆಚ್ಚ, ಪುಸ್ತಕಗಳು ಇತ್ಯಾದಿಗಳನ್ನು ಮತ್ತು ಸಾರಿಗೆ ಶುಲ್ಕವನ್ನು ಪಾವತಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ನಾವು ಸ್ಪಷ್ಟಪಡಿಸುತ್ತೇವೆ” ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.
ಮುಜಫರ್ನಗರದಲ್ಲಿ ನಡೆದ ಕಪಾಳ ಮೋಕ್ಷ ಘಟನೆ ಮತ್ತು 2009ರ ಶಿಕ್ಷಣ ಹಕ್ಕು ಕಾಯ್ದೆ ಜಾರಿ ಸಂಬಂಧ ಕಾರ್ಯಕರ್ತ ತುಷಾರ್ ಗಾಂಧಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.
ಆಗಸ್ಟ್ 2023 ರಲ್ಲಿ, ಶಾಲಾ ಶಿಕ್ಷಕಿ ತ್ರಿಪ್ತಾ ತ್ಯಾಗಿ ಅವರು ಏಳು ವರ್ಷದ ಮುಸ್ಲಿಂ ಬಾಲಕನಿಗೆ ಕಪಾಳಮೋಕ್ಷ ಮಾಡುವಂತೆ ಇತರ ವಿದ್ಯಾರ್ಥಿಗಳಿಗೆ ಸೂಚಿಸುತ್ತಿರುವ ವೀಡಿಯೊ ವೈರಲ್ ಆಗಿತ್ತು.
ಘಟನೆಯ ಮೂರು ತಿಂಗಳ ನಂತರ, ಮಗುವನ್ನು ಮುಜಫರ್ನಗರದ ಮತ್ತೊಂದು ಖಾಸಗಿ ಶಾಲೆಗೆ ಸೇರಿಸಲಾಗುವುದು. ಮಗುವಿನ ಎಲ್ಲಾ ಶೈಕ್ಷಣಿಕ ವೆಚ್ಚಗಳನ್ನು ಸರಕಾರದ ಯೋಜನೆಯಡಿಯಲ್ಲಿ ಭರಿಸಲಾಗುವುದು ಎಂದು ರಾಜ್ಯ ಸರಕಾರವು ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.
ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಶದನ್ ಫರಾಸತ್, ಮಗುವಿನ ಕೊನೆಯ ಸೆಮಿಸ್ಟರ್ನ ಬೋಧನಾ ಶುಲ್ಕವನ್ನು ಪಾವತಿಸಲಾಗಿಲ್ಲ, ಸಮವಸ್ತ್ರದ ವೆಚ್ಚಗಳು ಇನ್ನೂ ಬಾಕಿ ಉಳಿದಿವೆ ಮತ್ತು ಸಾರಿಗೆ ವೆಚ್ಚವನ್ನು ಎರಡು ದಿನಗಳ ಹಿಂದೆಯಷ್ಟೇ ಮರುಪಾವತಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಗಮನಕ್ಕೆ ತಂದರು.
ಕೃಷಿಕರಾಗಿರುವ ಕುಟುಂಬವು ಆರ್ಥಿಕ ಹೊರೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಘಟನೆಯ ಬಳಿಕ ನಿರಂತರ ಅವಮಾನವನ್ನು ಎದುರಿಸುತ್ತಿದ್ದಾರೆ. ಇದನ್ನು ಪರಿಗಣಿಸಿ ಮಗು ಅಥವಾ ಮಗುವಿನ ತಂದೆಯ ಮೂಲಕ ಪಾವತಿಗಳನ್ನು ಮಾಡುವ ಬದಲು ಶಾಲೆಗೆ ನೇರವಾಗಿ ಪಾವತಿ ಮಾಡುವಂತೆ ರಾಜ್ಯಕ್ಕೆ ನಿರ್ದೇಶನ ನೀಡಬೇಕೆಂದು ಫರಾಸತ್ ನ್ಯಾಯಾಲಯವನ್ನು ಕೋರಿದರು.