ನಾಗಾಲ್ಯಾಂಡ್: ‘ವಂದೇ ಮಾತರಂ’ ಕಡ್ಡಾಯಕ್ಕೆ ಬಿಜೆಪಿಯ ಮಿತ್ರಪಕ್ಷ, ಆಡಳಿತಾರೂಢ ಎನ್ಪಿಎಫ್ ವಿರೋಧ

ಸಾಂದರ್ಭಿಕ ಚಿತ್ರ | Photo Credit : PTI
ಕೊಹಿಮಾ: ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರದ ನಿರ್ದೇಶನವು ನಾಗಾಲ್ಯಾಂಡ್ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗುತ್ತಿದೆ. ಬಿಜೆಪಿಯ ಮಿತ್ರಪಕ್ಷವಾಗಿರುವ ಆಡಳಿತಾರೂಢ ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್) ಶಿಕ್ಷಣ ಸಂಸ್ಥೆಗಳು ಮತ್ತು ವಿಧಾನಸಭೆಯಲ್ಲಿ ರಾಷ್ಟ್ರೀಯ ಗೀತೆಯನ್ನು ನುಡಿಸುವುದನ್ನು ವಿರೋಧಿಸಿದ್ದು,ಈ ವಿಷಯವನ್ನು ಮರುಪರಿಶೀಲಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
ʼವಂದೇ ಮಾತರಂʼ ಕುರಿತು ಕೇಂದ್ರದ ನಿರ್ದೇಶನವು ಸಂವಿಧಾನದ 371(ಎ) ವಿಧಿಯಡಿ ರಕ್ಷಿಸಲ್ಪಟ್ಟಿರುವ ನಾಗಾ ಸಂಸ್ಕೃತಿ ಮತ್ತು ನಂಬಿಕೆಗೆ ನೇರ ಬೆದರಿಕೆಯಾಗಿದೆ ಎಂದು ಹೇಳಿಕೆಯಲ್ಲಿ ಬಣ್ಣಿಸಿರುವ ಎನ್ಪಿಎಫ್, ‘ಇಂತಹ ಗೀತೆಯ ಬಲವಂತದ ಹೇರಿಕೆಯು ನಮಗೆ ಪರಕೀಯವಾಗಿದೆ, ಸ್ನೇಹಪರವಲ್ಲ ಮತ್ತು ಮೂಲಭೂತ ಹಕ್ಕುಗಳಿಗೆ ಬೆದರಿಕೆಯಾಗಿದೆ’ ಎಂದು ಹೇಳಿದೆ.
ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಕಾವೇರಿದ ಚರ್ಚೆಗಳ ಬಳಿಕ ಎನ್ಪಿಎಫ್ ಹೇಳಿಕೆ ಬಿಡುಗಡೆಯಾಗಿದೆ. ಶುಕ್ರವಾರ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯದ ಕೇಂದ್ರೀಯ ವಿವಿಯ ಘಟಿಕೋತ್ಸವದಲ್ಲಿ ‘ವಂದೇ ಮಾತರಂ’ ನುಡಿಸಿದಾಗ ಕೆಲವು ವಿದ್ಯಾರ್ಥಿಗಳು ಕುಳಿತೇ ಇದ್ದರು.
ನಾಗಾಲ್ಯಾಂಡ್ನಲ್ಲಿ ಕೇಂದ್ರದ ನಿರ್ದೇಶನವನ್ನು ವಿರೋಧಿಸುವವರು ವಿಧಿ 371(ಎ) ಅಡಿ ನಾಗಾ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳಿಗೆ ಒದಗಿಸಲಾಗಿರುವ ವಿಶೇಷ ಸಾಂವಿಧಾನಿಕ ರಕ್ಷಣೆಯನ್ನು ಬೆಟ್ಟು ಮಾಡಿದ್ದಾರೆ. ರಾಷ್ಟ್ರೀಯ ಗೀತೆಯಲ್ಲಿನ ಧಾರ್ಮಿಕ ಚಿತ್ರಣವು ರಾಜ್ಯದಲ್ಲಿ ಕೇಂದ್ರದ ಆದೇಶವನ್ನು ಸುಸಂಗತವಾಗಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ನಾಗಾಲ್ಯಾಂಡ್ನಲ್ಲಿ ಶೇ.87ಕ್ಕೂ ಅಧಿಕ ಜನರು ಕ್ರೈಸ್ತರಾಗಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ದಿನ ರಾಜ್ಯಪಾಲ ಅಜಯ್ ಕುಮಾರ್ ಅವರು ಸದನವನ್ನುದ್ದೇಶಿಸಿ ಭಾಷಣ ಮಾಡಿದ ಸಂದರ್ಭ ವಂದೇ ಮಾತರಂ ನುಡಿಸಿದ ಬಳಿಕ ವಿವಾದವು ಭುಗಿಲೆದ್ದಿತ್ತು. ಮರುದಿನ ಸದನದಲ್ಲಿ ಶಾಸಕರು ಇದನ್ನು ವಿರೋಧಿಸಿ ಮಾತನಾಡಿದರು.
ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಯಾವುದೇ ಪ್ರತಿಪಕ್ಷವಿಲ್ಲ. 33 ಶಾಸಕರನ್ನು ಹೊಂದಿರುವ ಎನ್ಪಿಎಫ್ ಮತ್ತು 12 ಶಾಸಕರಿರುವ ಬಿಜೆಪಿ ಸಮ್ಮಿಶ್ರ ಸರಕಾರವನ್ನು ನಡೆಸುತ್ತಿವೆ. ಇತರ 15 ಶಾಸಕರೂ ಸರಕಾರವನ್ನು ಬೆಂಬಲಿಸುತ್ತಿದ್ದಾರೆ.
ಸದನದಲ್ಲಿ ಚರ್ಚೆ ಸಂದರ್ಭದಲ್ಲಿ ಬಿಜೆಪಿ ನಾಯಕ ಹಾಗೂ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಕೇಂದ್ರದ ನಿರ್ದೇಶನವನ್ನು ಬೆಂಬಲಿಸಿದ ಏಕೈಕ ಶಾಸಕರಾಗಿದ್ದರು.







