ಎನ್-ಕನ್ವೆನ್ಷನ್ ಸೆಂಟರ್ ನೆಲಸಮ: ಎರಡು ಎಕರೆ ಜಮೀನನ್ನು ತೆಲಂಗಾಣ ಸರಕಾರಕ್ಕೆ ಹಿಂದಿರುಗಿಸಿದ ನಟ ನಾಗಾರ್ಜುನ

ನಟ ನಾಗಾರ್ಜುನ | Photo: Instagram/akkineninagarjuna7
ಹೈದರಾಬಾದ್: ತಮ್ಮಿಡಿಕುಂಟ ಕೆರೆಯ ಬಫರ್ ವಲಯದ ಒತ್ತುವರಿಗೊಂಡ ಜಮೀನಿನಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಮಾದಾಪುರದಲ್ಲಿನ ತಮ್ಮ ಜಂಟಿ ಮಾಲಕತ್ವದ ಎನ್-ಕನ್ವೆನ್ಷನ್ ಸೆಂಟರ್ ಅನ್ನು ಪ್ರಾಧಿಕಾರಗಳು ನೆಲಸಮಗೊಳಿಸಿದ ನಂತರ, ನಟ ನಾಗಾರ್ಜುನ ಅವರು ಸಮಾರು ಎರಡು ಎಕರೆಗೂ ಹೆಚ್ಚು ಜಮೀನನ್ನು ಸರಕಾರಕ್ಕೆ ಹಸ್ತಾಂತರಿಸಿದ್ದಾರೆ ಎಂದು ಶನಿವಾರ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ತಿಳಿಸಿದ್ದಾರೆ.
ಮೇಲುಸೇತುವೆಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರು ಮತ್ತು ಕೊಳಚೆಯ ಸುಗಮ ಹರಿಯುವಿಕೆಯನ್ನು ಖಾತರಿಪಡಿಸಲು ಹಾಗೂ ಕಾಲನಿಗಳ ಮುಳುಗಡೆಯನ್ನು ತಡೆಗಟ್ಟಲು ನಗರದಲ್ಲಿನ ಕೆರೆಗಳನ್ನು ಸಂರಕ್ಷಿಸಿ, ರಕ್ಷಿಸಬೇಕಾದ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.
“ರಾಜ್ಯ ಸರಕಾರ ಎನ್-ಕನ್ವೆನ್ಷನ್ ಸೆಂಟರ್ ನ ಅಕ್ರಮ ನಿರ್ಮಾಣವನ್ನು ತೆರವುಗೊಳಿಸಿತ್ತು. ಇದಾದ ನಂತರ ತಮ್ಮ ಅಕ್ರಮ ನಿರ್ಮಾಣದ ಬಗ್ಗೆ ನಟ ನಾಗಾರ್ಜುನರಿಗೆ ಮನವರಿಕೆಯಾದ ನಂತರ, ತಾವೇ ಮುಂದೆ ಬಂದು, ಎರಡು ಎಕರೆಯಷ್ಟು ಒತ್ತುವರಿಗೊಂಡಿದ್ದ ಜಮೀನನ್ನು ಸರಕಾರಕ್ಕೆ ಹಸ್ತಾಂತರಿಸಿದ್ದಾರೆ. ಅವರೇ ಖುದ್ದಾಗಿ ನನ್ನನ್ನು ಭೇಟಿ ಮಾಡಿ, ಜಮೀನನ್ನು ಹಸ್ತಾಂತರಿಸಿದರಲ್ಲದೆ, ನನಗೆ ಹೀರೊ ಆಗಬೇಕಿದೆ ಹಾಗೂ ನಗರದ ಅಭಿವೃದ್ಧಿಯಲ್ಲಿ ಪಾಲುದಾರನಾಗಬೇಕಿದೆ ಎಂದು ತಿಳಿಸಿದರು” ಎಂದೂ ಅವರು ತಿಳಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಈ ಕೆರೆಯ ಬಫರ್ ವಲಯದಲ್ಲಿನ ಒತ್ತುವರಿಗಳನ್ನು ಹೈದರಾಬಾದ್ ವಿಪತ್ತು ನಿರ್ವಹಣೆ ಮತ್ತು ಆಸ್ತಿ ರಕ್ಷಣೆ ಸಂಸ್ಥೆ (HYDRAA), ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್, ನಗರ ಯೋಜನೆ, ನೀರಾವರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದ್ದರು. ಹೀಗೆ ತೆರವುಗೊಂಡ ಹಲವು ಅನಧಿಕೃತ ಕಟ್ಟಡಗಳ ಪೈಕಿ ಎನ್-ಕನ್ವೆನ್ಷನ್ ಸೆಂಟರ್ ಕೂಡಾ ಒಂದಾಗಿತ್ತು.







