ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಪತಿ ಅಮಿತ್ ಸಾಹು ಬಂಧನ

ಸನಾ ಖಾನ್ (Facebook) / ಅಮಿತ್ ಸಾಹು (Credit:marathi.abplive.com)
ನಾಗ್ಪುರ: ನಾಗ್ಪುರ ಬಿಜೆಪಿ ನಾಯಕಿ ಸನಾ ಖಾನ್ ನಾಪತ್ತೆಯಾದ ಹತ್ತು ದಿನಗಳ ನಂತರ ಹತ್ಯೆ ಆರೋಪದಲ್ಲಿ ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಕೆಯ ಪತಿ ಅಮಿತ್ ಸಾಹು ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಿತ್ ಸಾಹು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು ನಾಗ್ಪುರ ಪೊಲೀಸರ ತಂಡವು ಜಬಲ್ಪುರದ ಘೋರಾ ಬಜಾರ್ ಪ್ರದೇಶದಲ್ಲಿ ಇನ್ನೊಬ್ಬ ವ್ಯಕ್ತಿಯ ಜೊತೆಗೆ ಸಾಹುನನ್ನು ಬಂಧಿಸಿತು.
ಪೊಲೀಸರ ಪ್ರಕಾರ, ಸಾಹು ತನ್ನ ಪತ್ನಿ ಸನಾ ಖಾನ್ ಅವರ ಮೃತದೇಹವನ್ನು ನದಿಗೆ ಎಸೆದಿದ್ದ. ಆದರೆ, ಸಂತ್ರಸ್ತೆಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗ್ಪುರ ನಿವಾಸಿ ಹಾಗೂ ಬಿಜೆಪಿ ಅಲ್ಪಸಂಖ್ಯಾತ ಸೆಲ್ ಸದಸ್ಯೆ ಸನಾ ಖಾನ್ ಜಬಲ್ಪುರಕ್ಕೆ ಭೇಟಿ ನೀಡಿದ ನಂತರ ನಾಪತ್ತೆಯಾಗಿದ್ದಾರೆ. ಆಕೆಯ ಕುಟುಂಬದ ಪ್ರಕಾರ, ಆಗಸ್ಟ್ 1 ರಂದು ಸನಾ ಖಾನ್ ಅವರು ಜಬಲ್ಪುರದಲ್ಲಿದ್ದರು. ಅಲ್ಲಿ ಆಕೆ ಅವರು ಸಾಹುವನ್ನು ಭೇಟಿಯಾಗಲು ಹೋಗಿದ್ದರು. ಸನಾ ಖಾನ್ ನಾಗ್ಪುರದಿಂದ ಖಾಸಗಿ ಬಸ್ನಲ್ಲಿ ಹೊರಟಿದ್ದರು ಹಾಗೂ ನಗರವನ್ನು ತಲುಪಿದ ಮರುದಿನ ತನ್ನ ತಾಯಿಗೆ ಕರೆ ಮಾಡಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಆಕೆ ನಾಪತ್ತೆಯಾಗಿದ್ದಳು.
ಇಬ್ಬರು ಆರೋಪಿಗಳನ್ನು ಬಂಧಿಸಿರುವ ನಾಗ್ಪುರ ಪೊಲೀಸ್ ತಂಡ ಮಹಾರಾಷ್ಟ್ರಕ್ಕೆ ತೆರಳಿದ್ದು, ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.







