ʼನಾಸಿರುದ್ದೀನ್ ಶಾ ಅಪಾಯಕಾರಿ ನಗರ ನಕ್ಸಲ್ʼ: ಕೇಂದ್ರ ಸಚಿವ ಕಿರಣ್ ರಿಜಿಜು ವಿವಾದಾತ್ಮಕ ಹೇಳಿಕೆ

Photo: PTI
ಹೊಸದಲ್ಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವನ್ನು ಮರುಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ ಹಿರಿಯ ನಟ ನಾಸಿರುದ್ದೀನ್ ಶಾ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ವಾಗ್ದಾಳಿ ನಡೆಸಿದ್ದಾರೆ. ನಾಸಿರುದ್ದೀನ್ ಶಾ ಅವರನ್ನು ‘ಅಪಾಯಕಾರಿ ನಗರ ನಕ್ಸಲ್’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ನಾಸಿರುದ್ದೀನ್ ಶಾ ಒಬ್ಬ ಸಾಮಾನ್ಯ ನಟ ಎಂದು ಭಾವಿಸಿದ್ದೆ. ಅವರನ್ನು ಗೌರವಿಸುತ್ತಿದ್ದೆ ಮತ್ತು ಇಷ್ಟಪಡುತ್ತಿದ್ದೆ. ಆದರೆ ಅವರು ಅಪಾಯಕಾರಿ ನಗರ ನಕ್ಸಲ್ ಎಂಬುದು ನನಗೆ ತಿಳಿದಿರಲಿಲ್ಲ. ಅವರ ನಿಜವಾದ ವ್ಯಕ್ತಿತ್ವವನ್ನು ಅರಿಯಲು ತುಂಬಾ ತಡವಾಯಿತು. ಅವರು ಭಾರತದ ಪ್ರಜಾಪ್ರಭುತ್ವಕ್ಕೆ ಅತ್ಯಂತ ಹಾನಿಕಾರಕ’ ಎಂದು ರಿಜಿಜು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸರಕಾರವನ್ನು ಟೀಕಿಸುವವರನ್ನು ‘ದೇಶವಿರೋಧಿ’ ಮತ್ತು ‘ಟುಕಡೆ-ಟುಕಡೆ ಗ್ಯಾಂಗ್’ ಎಂದು ಕರೆಯುವವರಿಗೆ ತಿರುಗೇಟು ನೀಡಿದ್ದ ನಟ ನಾಸಿರುದ್ದೀನ್ ಶಾ ಅವರು ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಾನು ಬೌದ್ಧಿಕ ನಕ್ಸಲ್ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದಿದ್ದರು .




