AMUನ ವಿದ್ಯಾರ್ಥಿ ಸಂಘದ ಉನ್ನತ ಹುದ್ದೆಗೇರಿದ ಮೊದಲ ಮಹಿಳೆ ನಶ್ರ ನಯೀಮ್: 8 ವರ್ಷಗಳ ಬಳಿಕ ನಡೆದ ಚುನಾವಣೆ; ಉಪಾಧ್ಯಕ್ಷೆಯಾಗಿ ಆಯ್ಕೆ

ನಶ್ರ ನಯೀಮ್ (Photo: The Observer Post)
ಅಲಿಗಢ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಕಾನೂನು ವಿದ್ಯಾರ್ಥಿನಿ ನಶ್ರ ನಯೀಮ್ ಹೊಸ ಇತಿಹಾಸ ಬರೆದಿದ್ದಾರೆ. ವಿದ್ಯಾರ್ಥಿ ಸಂಘದ ಮೂರು ಪ್ರಮುಖ ಹುದ್ದೆಗಳಾದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಗೌರವ ಕಾರ್ಯದರ್ಶಿ ಪೈಕಿ ಒಂದಕ್ಕೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಎಂಟು ವರ್ಷಗಳ ಸುದೀರ್ಘ ಅಂತರದ ಬಳಿಕ ನಡೆದ ಚುನಾವಣೆಯಲ್ಲಿ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಸಂಶೋಧನಾ ವಿದ್ಯಾರ್ಥಿ ಮೊಹಮ್ಮದ್ ನೋಮಾನ್ ಅಶ್ರಫ್ ಅಧ್ಯಕ್ಷರಾಗಿ ಹಾಗೂ ಬಿ.ಟೆಕ್ ವಿದ್ಯಾರ್ಥಿ ಮೊಹಮ್ಮದ್ ಹಮ್ದಾನ್ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಗುರುವಾರ ರಾತ್ರಿಯಿಡೀ ನಡೆದ ಮತ ಎಣಿಕೆ ಬಳಿಕ ಶುಕ್ರವಾರ ಬೆಳಿಗ್ಗೆ ಫಲಿತಾಂಶ ಪ್ರಕಟಿಸಲಾಯಿತು.
ನವೆಂಬರ್ 5ರಂದು ವಿಶ್ವವಿದ್ಯಾಲಯದ 13 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಚುನಾಯಿತ ವಿದ್ಯಾರ್ಥಿ ಸಂಘವನ್ನು ಪುನಃಸ್ಥಾಪಿಸಬೇಕೆಂದು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗಳ ಬಳಿಕ ಚುನಾವಣೆ ನಡೆದಿತ್ತು.
ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮೊಹಮ್ಮದ್ ನೋಮಾನ್ ಅಶ್ರಫ್ ಅಧ್ಯಕ್ಷ ಸ್ಥಾನಕ್ಕೆ 7,797 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಮೊಹಮ್ಮದ್ ಇಂತಿಕಾಬ್ 3,676 ಮತಗಳನ್ನು ಪಡೆದರು. ಈ ಮೂಲಕ ಅಶ್ರಫ್ 4,121 ಮತಗಳ ಅಂತರದಿಂದ ಜಯಗಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಶ್ರ ನಯೀಮ್ 7,091 ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಸಾಕಿಬ್ ಅಲಿ ಖಾನ್ 5,818 ಮತಗಳನ್ನು ಗಳಿಸಿದರು. ನಯೀಮ್ 1,273 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಟೆಕ್ ವಿದ್ಯಾರ್ಥಿ ಮೊಹಮ್ಮದ್ ಹಮ್ದಾನ್ 8,385 ಮತಗಳನ್ನು ಪಡೆದು ಆಯ್ಕೆಯಾದರು. ಅವರ ಸಮೀಪದ ಪ್ರತಿಸ್ಪರ್ಧಿ ಅಹ್ಮದ್ ಫರಾಝ್ ರಾಝಿ 6,882 ಮತಗಳನ್ನು ಪಡೆದರು. ಹಮ್ದಾನ್ 1,503 ಮತಗಳ ಅಂತರದಿಂದ ಜಯಗಳಿಸಿದರು.
AMU ಇತಿಹಾಸದಲ್ಲಿ ನಯೀಮ್ ದಾಖಲೆ
AMU ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಅಥವಾ ಗೌರವ ಕಾರ್ಯದರ್ಶಿ ಎಂಬ ಮೂರು ಪ್ರಮುಖ ಹುದ್ದೆಗಳ ಪೈಕಿ ಒಂದಕ್ಕೆ ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಇದೇ ಮೊದಲು.
ಉತ್ತರ ಪ್ರದೇಶದವರಾದ ನಶ್ರ ನಯೀಮ್ ಕಾನೂನು ವಿದ್ಯಾರ್ಥಿನಿಯಾಗಿದ್ದು, 'ಫ್ರಾಟರ್ನಿಟಿ ಮೂವ್ಮೆಂಟ್'ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯೆಯೂ ಆಗಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ ಅವರು, ತಮ್ಮ ಚುನಾವಣಾ ಪ್ರಚಾರಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಸೀಮಿತ ಸಂಪನ್ಮೂಲಗಳು ಮತ್ತು ಸಣ್ಣ ತಂಡದೊಂದಿಗೆ ಅಲ್ಪಾವಧಿಯಲ್ಲೇ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
"ಸೀಮಿತ ಸಂಪನ್ಮೂಲಗಳು ಮತ್ತು ಸಣ್ಣ ತಂಡದೊಂದಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿದ್ದರೆ, ಅದಕ್ಕೆ ನಮ್ಮೊಂದಿಗೆ ಕೈಜೋಡಿಸಿದವರ ಬದ್ಧತೆ, ಧೈರ್ಯ ಮತ್ತು ಪ್ರಾಮಾಣಿಕತೆಯೇ ಕಾರಣ" ಎಂದು ಅವರು ತಿಳಿಸಿದರು.
ಚುನಾಯಿತ ವಿದ್ಯಾರ್ಥಿ ಸಂಘ ಅಸ್ತಿತ್ವದಲ್ಲಿರದ ವರ್ಷಗಳಲ್ಲಿ ಬಗೆಹರಿಯದೆ ಉಳಿದಿದ್ದ ಸಮಸ್ಯೆಗಳನ್ನು ನಯೀಮ್ ಪ್ರಸ್ತಾಪಿಸಿದರು. ವಿಶ್ವವಿದ್ಯಾಲಯದಲ್ಲಿ ನಾಯಕತ್ವವನ್ನು ಅರ್ಥೈಸಿಕೊಳ್ಳುವ ರೀತಿಯಲ್ಲಿ ಬದಲಾವಣೆಯಾಗಬೇಕೆಂದು ಕರೆ ನೀಡಿದರು.
ತಮ್ಮ ಗೆಲುವನ್ನು ಇಡೀ ವಿದ್ಯಾರ್ಥಿ ಸಮುದಾಯದ ಗೆಲುವು ಎಂದು ಬಣ್ಣಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳೆಯರು ನಾಯಕತ್ವದ ಹುದ್ದೆಗಳನ್ನು ಅಲಂಕರಿಸಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದರು.






