ಡಿ. 25ರಂದು ನವೀ ಮುಂಬೈ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭ

Photo Credit: PTI
ಮುಂಬೈ: ಮುಂಬೈಯ ಎರಡನೇ ವಿಮಾನ ನಿಲ್ದಾಣವಾಗಿ ನಿರ್ಮಿಸಲಾಗಿರುವ ನವೀ ಮುಂಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಡಿಸೆಂಬರ್ 25ರಿಂದ ತನ್ನ ವಾಣಿಜ್ಯ ಕಾರ್ಯಾಚರಣೆಗಳನ್ನು ಆರಂಭಿಸಲು ಸಿದ್ಧವಾಗಿದೆ. ಡಿಜಿಟಲ್-ಫಸ್ಟ್ ಪ್ರಯಾಣಿಕ ಸಂವಹನ ವ್ಯವಸ್ಥೆ, ವೈ-ಫೈ ಚಾಲಿತ ಆ್ಯಪ್ ಮತ್ತು ವರ್ಚುವಲ್ ಅಸಿಸ್ಟಾಂಟ್ ವ್ಯವಸ್ಥೆಯೊಂದಿಗೆ ಈ ವಿಮಾನ ನಿಲ್ದಾಣವು ವ್ಯಾಪಕ ಶ್ರೇಣಿಯ ಆಧುನಿಕ ಸೌಲಭ್ಯಗಳನ್ನು ನೀಡುತ್ತಿದೆ.
ಈ ವಿಮಾನ ನಿಲ್ದಾಣವು ಆರಂಭದಲ್ಲಿ ಸೀಮಿತ ಸಂಖ್ಯೆಯ ವಿಮಾನಗಳನ್ನು ನಿರ್ವಹಿಸುತ್ತದೆ. ಬಳಿಕ ಹಂತಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸುತ್ತದೆ.
ವಿಮಾನ ನಿಲ್ದಾಣದಲ್ಲಿ ಮೊಬೈಲ್ ನೆಟ್ವರ್ಕ್ ಸೇವೆಗಳನ್ನು ನೀಡಲು ಅದು ಬಿಎಸ್ಎನ್ಎಲ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ವಿಮಾನ ನಿಲ್ದಾಣವು ಮೊದಲ ಹಂತದಲ್ಲಿ ವರ್ಷಕ್ಕೆ ಎರಡು ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಮಾನ ನಿಲ್ದಾಣವನ್ನು 19,650 ಕೋಟಿ ರೂಪಾಯಿ ಆರಂಭಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಅದರ ಸಾಮರ್ಥ್ಯವನ್ನು 9 ಕೋಟಿ ಪ್ರಯಾಣಿಕರಿಗೆ ಹೆಚ್ಚಿಸುವ ಯೋಜನೆಯಿದೆ.
ಮುಂಬೈಯಲ್ಲಿ ಈಗ ಇರುವ ವಿಮಾನ ನಿಲ್ದಾಣದ ನಿಬಿಡತೆಯನ್ನು ನವೀ ಮುಂಬೈ ವಿಮಾನ ನಿಲ್ದಾಣವು ಕಡಿಮೆ ಮಾಡುತ್ತದೆ.







