‘ಥೂಕ್ ಜಿಹಾದ್’ ಪದ ಬಳಕೆ; ಕೋಮು ಬಣ್ಣ ನೀಡಿದ NDTVಗೆ NBDSA ಎಚ್ಚರಿಕೆ

Photo Credit : NDTV , NBDSA
ಹೊಸದಿಲ್ಲಿ: ಆಹಾರದ ಮೇಲೆ ಉಗುಳುವ ಘಟನೆಯನ್ನು ವರದಿ ಮಾಡುವ ವೇಳೆ ‘ಥೂಕ್ ಜಿಹಾದ್’ ಎಂಬ ಪದ ಬಳಸಿ ಕೋಮು ಬಣ್ಣ ನೀಡಿದ ಹಿನ್ನೆಲೆಯಲ್ಲಿ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (NBDSA) ಖಾಸಗಿ ಸುದ್ದಿ ವಾಹಿನಿ NDTVಗೆ ಎಚ್ಚರಿಕೆ ನೀಡಿದೆ.
ಮುಸ್ಲಿಂ ಸಮುದಾಯದ ವಿರುದ್ಧ ಆಧಾರರಹಿತ, ಕೋಮು ಬಣ್ಣ ನೀಡುವ ರೀತಿಯಲ್ಲಿ ವರದಿ ಪ್ರಸಾರವಾಗಿದೆ ಎಂದು NBDSA ಹೇಳಿದೆ.
2024ರ ಡಿಸೆಂಬರ್ನಲ್ಲಿ ಉತ್ತರ ಪ್ರದೇಶದ ಮೀರತ್ ನಲ್ಲಿ ವೈರಲ್ ಆಗಿದ್ದ ವೀಡಿಯೊವೊಂದರಲ್ಲಿ ವ್ಯಕ್ತಿಯೊಬ್ಬ ರೊಟ್ಟಿ ತಯಾರಿಸುವ ವೇಳೆ ಅದರ ಮೇಲೆ ಉಗುಳುತ್ತಿರುವ ದೃಶ್ಯ ಕಾಣಿಸಿಕೊಂಡಿತ್ತು. ಈ ಘಟನೆಯನ್ನು ವರದಿ ಮಾಡುವ ವೇಳೆ NDTV ‘ಥೂಕ್ ಜಿಹಾದ್’ ಎಂಬ ಪದ ಬಳಸಿತ್ತು. ಜೊತೆಗೆ, ಇಂತಹ ಘಟನೆಗಳು ಹಲವು ಕಡೆಗಳಲ್ಲಿ ನಡೆಯುತ್ತಿವೆ ಎಂಬ ರೀತಿಯ ನಿರೂಪಣೆಯನ್ನೂ ಮಾಡಲಾಗಿತ್ತು.
ಮೇ 19ರಂದು ನೀಡಿದ ಆದೇಶದಲ್ಲಿ NBDSA ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ. ಸಿಕ್ರಿ, ಘಟನೆ ಗಂಭೀರವಾಗಿದ್ದು ಅದನ್ನು ವರದಿ ಮಾಡುವುದು ತಪ್ಪಲ್ಲ. ಆದರೆ, ಅದನ್ನು ‘ಥೂಕ್ ಜಿಹಾದ್’ ಎಂದು ಕರೆಯುವುದು ಹಾಗೂ ಇಂತಹ ಘಟನೆಗಳು ವ್ಯಾಪಕವಾಗಿ ನಡೆಯುತ್ತಿವೆ ಎಂಬ ರೀತಿಯಲ್ಲಿ ತೋರಿಸುವುದು ಪ್ರಸಾರ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
“ಈ ರೀತಿಯ ಪದ ಬಳಕೆ ನಿರ್ದಿಷ್ಟ ಧಾರ್ಮಿಕ ಸಮುದಾಯದ ಬಗ್ಗೆ ತಪ್ಪು ಕಲ್ಪನೆ ಮೂಡಿಸುವ ಅಪಾಯ ಉಂಟುಮಾಡುತ್ತದೆ” ಎಂದು NBDSA ಹೇಳಿದೆ.
ದೂರುದಾರರು, ‘ಜಿಹಾದ್’ ಎಂಬ ಪದ ಬಳಸಿ ಪ್ರತ್ಯೇಕ ಘಟನೆಯನ್ನು ಕೋಮು ಬಣ್ಣದಲ್ಲಿ ಚಿತ್ರಿಸಲಾಗಿದೆ. ಇದರಿಂದ ದ್ವೇಷ ಭಾಷಣ ಮತ್ತು ಕೋಮು ವರದಿ ವಿರುದ್ಧದ ಮಾರ್ಗಸೂಚಿಗಳು ಉಲ್ಲಂಘನೆಯಾಗಿವೆ ಎಂದು ಆರೋಪಿಸಿದ್ದರು. ಪ್ರಸಾರದಲ್ಲಿ ಆರೋಪಿಯ ಹೇಳಿಕೆಗಳನ್ನು ಸರಿಯಾದ ಪರಿಶೀಲನೆ ಇಲ್ಲದೆ ಪ್ರಸಾರ ಮಾಡಲಾಗಿದೆ ಮತ್ತು ಘಟನೆಯ ಎಲ್ಲ ಮಾಹಿತಿ ನೀಡಲಾಗಿಲ್ಲ ಎಂಬ ಆಕ್ಷೇಪಗಳನ್ನೂ NBDSA ಉಲ್ಲೇಖಿಸಿದೆ.
ದೂರಿಗೆ ಉತ್ತರಿಸಿದ NDTV, ತನ್ನ ವರದಿ ಸಾರ್ವಜನಿಕ ಆರೋಗ್ಯ, ಆಹಾರ ನೈರ್ಮಲ್ಯ ಮತ್ತು ಸಮಾಜವಿರೋಧಿ ವರ್ತನೆ ಕುರಿತಾಗಿತ್ತು ಎಂದು ಹೇಳಿದೆ. ಈಗಾಗಲೇ ಸಾರ್ವಜನಿಕ ವಲಯದಲ್ಲಿದ್ದ ವಿಷಯವನ್ನೇ ಆಧರಿಸಿ ವರದಿ ಮಾಡಲಾಗಿದೆ ಎಂದು ವಾಹಿನಿ ಸಮರ್ಥಿಸಿಕೊಂಡಿದೆ.
‘ಥೂಕ್ ಜಿಹಾದ್’ ಎಂಬ ಪದವು ಸಾರ್ವಜನಿಕ ಚರ್ಚೆಯಲ್ಲಿ ಬಳಕೆಯಲ್ಲಿರುವ ಪದವಾಗಿದ್ದು, ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಉದ್ದೇಶ ಇರಲಿಲ್ಲ ಎಂದು NDTV ವಾದಿಸಿತು. ಬಳಿಕ ಸಂಬಂಧಿತ ವಿಷಯವನ್ನು ಸ್ವಯಂಪ್ರೇರಿತವಾಗಿ ತೆಗೆದುಹಾಕಲಾಗಿದೆ ಎಂದೂ ತಿಳಿಸಿತು.
ಆದರೆ, “ಯಾವುದೇ ಸಮುದಾಯದ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ‘ಜಿಹಾದ್’ ಎಂಬ ಪದ ಬಳಕೆ ನಿರ್ದಿಷ್ಟ ಸಮುದಾಯವನ್ನು ಸೂಚಿಸುವ ಅರ್ಥ ನೀಡುತ್ತದೆ” ಎಂದು NBDSA ಹೇಳಿದೆ. ವಿವಾದಿತ ಪ್ರಸಾರವನ್ನು ವಾಹಿನಿ ಈಗಾಗಲೇ ತೆಗೆದುಹಾಕಿರುವುದರಿಂದ, ದಂಡ ವಿಧಿಸದೆ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
“ಮುಂದೆ ಇಂತಹ ವ್ಯಾಪಕ ಸಾಮಾನ್ಯೀಕರಣಗಳನ್ನು ತಪ್ಪಿಸಿ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು NBDSA ಸೂಚಿಸಿದೆ.






