ಮುಸ್ಲಿಮರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ‘Zee News’ಗೆ NBDSA ಪ್ರಾಧಿಕಾರದಿಂದ ಛೀಮಾರಿ

ಹೊಸದಿಲ್ಲಿ: ಮುಸ್ಲಿಮರನ್ನು ಗುರಿಯಾಗಿಸುವ ಉದ್ದೇಶದಿಂದ ಪರಿಶೀಲಿಸದ ಮಾಹಿತಿಗಳನ್ನು ಆಧರಿಸಿ ದಾರಿ ತಪ್ಪಿಸುವ ಹಾಗೂ ಕೋಮು ಸೂಕ್ಷ್ಮ ವಿಷಯಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (NBDSA) ‘ಝೀ ನ್ಯೂಸ್’ಗೆ ಛೀಮಾರಿ ಹಾಕಿದೆ.
ಈ ಸಂಬಂಧ ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿರುವ NBDSA ಅಧ್ಯಕ್ಷ ಎ.ಕೆ. ಸಿಕ್ರಿ, ವಾಹಿನಿಯು ನಿಖರತೆ, ಪರಿಶೀಲನೆ ಹಾಗೂ ಕೋಮು ಸೌಹಾರ್ದತೆಯಂತಹ ಪತ್ರಿಕೋದ್ಯಮದ ಮೂಲಭೂತ ತತ್ವಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.
ಒಂದು ಪ್ರಕರಣದಲ್ಲಿ ಸಂಬಂಧಿತ ಸುದ್ದಿ ತುಣುಕನ್ನು ತೆಗೆದುಹಾಕುವಂತೆ ಪ್ರಾಧಿಕಾರ ಸೂಚಿಸಿದ್ದು, ಮತ್ತೊಂದು ಪ್ರಕರಣದಲ್ಲಿ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಮೊದಲ ಪ್ರಕರಣವು 2025ರ ಜುಲೈ 13ರಂದು ಪ್ರಸಾರವಾದ ಕಾರ್ಯಕ್ರಮಕ್ಕೆ ಸಂಬಂಧಿಸಿದೆ. ಶಿವಭಕ್ತರು ನಡೆಸುವ ಕನ್ವರ್ ಯಾತ್ರೆಯ ಸಂದರ್ಭದಲ್ಲಿ ದಿಲ್ಲಿಯ ರಸ್ತೆಯೊಂದರಲ್ಲಿ ಒಡೆದ ಗಾಜಿನ ಚೂರುಗಳು ಚೆಲ್ಲಾಪಿಲ್ಲಿಯಾಗಿದ್ದ ಘಟನೆ ಕುರಿತು ‘ಝೀ ನ್ಯೂಸ್’ ಚರ್ಚೆ ಪ್ರಸಾರ ಮಾಡಿತ್ತು. ಈ ಘಟನೆ ಕನ್ವರ್ ಯಾತ್ರಿಕರನ್ನು ಗುರಿಯಾಗಿಸಿಕೊಂಡು ಮಾಡಿರುವ ಪಿತೂರಿಯಾಗಿರಬಹುದೇ ಎಂಬ ಅನುಮಾನವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಗಿತ್ತು.
ಆದರೆ ದಾಖಲೆಗಳ ಪ್ರಕಾರ, ಗಾಜಿನ ಫಲಕಗಳನ್ನು ಸಾಗಿಸುತ್ತಿದ್ದ ಇ–ರಿಕ್ಷಾಗೆ ಹಿಂಬದಿಯಿಂದ ಮತ್ತೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಗಾಜುಗಳು ರಸ್ತೆಯ ಮೇಲೆ ಬಿದ್ದಿದ್ದವು ಎಂದು ತಿಳಿದುಬಂದಿದೆ.
ಚರ್ಚೆಯ ವೇಳೆ ನಿರೂಪಕ ಭಾಗವಹಿಸಿದ್ದವರ ಬಳಿ ಇಂತಹ ಅನುಮಾನ ಹುಟ್ಟಿಸುವ ಪ್ರಶ್ನೆಗಳನ್ನು ಕೇಳಿದ್ದರಿಂದ ಆರೋಪಗಳಿಗೆ ಮತ್ತಷ್ಟು ಉತ್ತೇಜನ ಸಿಕ್ಕಿತ್ತು ಎಂದು NBDSA ಹೇಳಿದೆ. ಪರಿಶೀಲಿಸದ ಆರೋಪಗಳನ್ನು ಹಿಂದೂ ಯಾತ್ರಾರ್ಥಿಗಳ ವಿರುದ್ಧದ ದ್ವೇಷದೊಂದ ಉದ್ದೇಶಪೂರ್ವಕವಾಗಿ ಚರ್ಚೆ ರೂಪಿಸಲಾಗಿದೆ ಎಂದು ಪ್ರಾಧಿಕಾರ ಟೀಕಿಸಿದೆ.
‘ಯಾವುದೇ ಸ್ವತಂತ್ರ ಪರಿಶೀಲನೆ ಇಲ್ಲದೆ ಊಹಾಪೋಹಗಳು ಮತ್ತು ರಾಜಕೀಯ ಹೇಳಿಕೆಗಳ ಆಧಾರದ ಮೇಲೆ ವಾಹಿನಿಯು ತನ್ನದೇ ಆದ ನಿರೂಪಣೆಯನ್ನು ಕಟ್ಟಿಕೊಟ್ಟಿದೆ. ಸಮುದಾಯವೊಂದಕ್ಕೆ ಕಳಂಕ ಹಚ್ಚಿ, ಕೋಮು ಸೌಹಾರ್ದತೆಯನ್ನು ಕದಡುವ ರೀತಿಯ ಚರ್ಚೆ ಸುದ್ದಿ ವಾಹಿನಿಗೆ ತಕ್ಕದ್ದಲ್ಲ’ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.
ಇನ್ನೊಂದು ಪ್ರಕರಣವು 2024ರ ಡಿಸೆಂಬರ್ 1ರಂದು ಪ್ರಸಾರವಾದ ಕಾರ್ಯಕ್ರಮಕ್ಕೆ ಸಂಬಂಧಿಸಿದೆ. ಈ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದೆ ಎಂದು ‘ಝೀ ನ್ಯೂಸ್’ ವರದಿ ಮಾಡಿತ್ತು.
ಈ ಕುರಿತು ದೂರು ನೀಡಿದ್ದ ವಕೀಲ ಇಂದ್ರಜೀತ್ ಘೋರ್ಪಡೆ, ದೇವರ ವಿಗ್ರಹವನ್ನು ಅಪವಿತ್ರಗೊಳಿಸುವ ದೃಶ್ಯಗಳನ್ನು ವಾಹಿನಿ ಬಾಂಗ್ಲಾದೇಶದ ಘಟನೆ ಎಂದು ಪ್ರಸಾರ ಮಾಡಿದೆ. ಆದರೆ ಆ ದೃಶ್ಯಗಳು ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಆಚರಣೆಯ ಭಾಗವಾಗಿದ್ದು, ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿಯೊಂದಾಗಿದೆ ಎಂದು ವಾದಿಸಿದ್ದರು.
ಈ ಆಚರಣೆಯ ವೇಳೆ ಹಳೆಯ ವಿಗ್ರಹವನ್ನು ವಿಧಿವತ್ತಾಗಿ ಭಗ್ನಗೊಳಿಸಿ, ಹೊಸ ವಿಗ್ರಹ ನಿರ್ಮಾಣವಾಗುವವರೆಗೆ ನೀರಿನಲ್ಲಿ ಮುಳುಗಿಸಲಾಗುತ್ತದೆ ಎಂದು ಅವರು ವಿವರಿಸಿದ್ದರು.
ತಾನು ಪ್ರಸಾರ ಮಾಡಿದ್ದ ದೃಶ್ಯಗಳು ಬಾಂಗ್ಲಾದೇಶದ್ದೇ ಎಂಬುದಕ್ಕೆ ಯಾವುದೇ ಪುರಾವೆ ಸಲ್ಲಿಸುವಲ್ಲಿ ‘ಝೀ ನ್ಯೂಸ್’ ವಿಫಲವಾಗಿದೆ ಎಂಬುದನ್ನು NBDSA ಗಮನಿಸಿತ್ತು. ಹೀಗಾಗಿ, ಇಂದ್ರಜೀತ್ ಘೋರ್ಪಡೆ ಸಲ್ಲಿಸಿದ್ದ ವಾದವನ್ನು ಮಾನ್ಯಗೊಳಿಸಿದ ಪ್ರಾಧಿಕಾರ, ವಾಹಿನಿಯ ಪ್ರಸಾರ ತಪ್ಪು ಆರೋಪ ಹಾಗೂ ದಾರಿ ತಪ್ಪಿಸುವ ಸ್ವರೂಪದ್ದಾಗಿದೆ ಎಂದು ಹೇಳಿದೆ.
ಆದರೆ ಸಂಬಂಧಿತ ವಿಡಿಯೊವನ್ನು ವಾಹಿನಿಯು ಈಗಾಗಲೇ ತೆಗೆದುಹಾಕಿರುವುದನ್ನು ಪರಿಗಣಿಸಿದ NBDSA, ದಂಡ ವಿಧಿಸುವ ಬದಲು ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.






