160 ಸ್ಥಾನಗಳೊಂದಿಗೆ ಬಿಹಾರದಲ್ಲಿ ಅಧಿಕಾರ ಚುಕ್ಕಾಣಿ : ಅಮಿತ್ ಶಾ ವಿಶ್ವಾಸ

ಅಮಿತ್ ಶಾ | Photo Credit : PTI
ಪಾಟ್ನಾ: ಬಿಹಾರ ವಿಧಾನಸಭೆಯ 243 ಸ್ಥಾನಗಳ ಪೈಕಿ 160ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ 2005ರ ಬಳಿಕ ಸತತ ಐದನೇ ಅವಧಿಗೆ ಮೂರನೇ ಎರಡು ಬಹುಮತದೊಂದಿಗೆ ಎನ್ಡಿಎ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಕ್ತಪಡಿಸಿದ್ದಾರೆ.
ಎನ್ಡಿಟಿವಿ ಸಿಇಓ ಮತ್ತು ಪ್ರಧಾನ ಸಂಪಾದಕ ರಾಹುಲ್ ಕನ್ವಲ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಶಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಹಾರ ರಾಜ್ಯವು ರಾಜಕೀಯವಾಗಿ ದೇಶದಲ್ಲೇ ಜಾಗೃತ ರಾಜ್ಯ ಎಂದು ಬಣ್ಣಿಸಿದ ಅವರು, ಕಳೆದ 20 ವರ್ಷಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ತಿಳಿಸಿದ್ದಾರೆ.
ನಿತೀಶ್ ಕುಮಾರ್ ಅವರ ಆಡಳಿತಾವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸುಧಾರಿಸಿದೆ ಮತ್ತು ಮೂಲಭೂತ ಪ್ರಗತಿ ಸಾಧಿಸಿದೆ ಎಂದು ಯಾವುದೇ ಯುವಕರನ್ನು ಕೇಳಿದರೆ ಉತ್ತರ ಬರುತ್ತದೆ ಎಂದು ಶಾ ಹೇಳಿದರು. ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ದರೋಡೆ, ಕೊಲೆ, ಲೂಟಿಯ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಕಳೆದ 20 ವರ್ಷಗಳಲ್ಲಿ ಪ್ರಗತಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿಕೊಂಡರು.
ಬಿಜೆಪಿಯ ಮುಖ್ಯ ಚುನಾವಣಾ ತಂತ್ರದಾರರಾಗಿರುವ ಶಾ, ನಿತೀಶ್ ಅವರು ಆಡಳಿತಾರೂಢ ಮೈತ್ರಿಕೂಟದ ಮುಖ ಎಂದು ಪುನರುಚ್ಚರಿಸಿದರು. ನಾನು 50ಕ್ಕೂ ಹೆಚ್ಚು ಬಾರಿ ಇದನ್ನು ಸ್ಪಷ್ಟಪಡಿಸಿದ್ದೇನೆ. ನಾವು ನಿತೀಶ್ ಅವರ ನಾಯಕತ್ವದಲ್ಲಿ ಹೋರಾಡುತ್ತಿದ್ದೇವೆ. ಅವರು ಮುಖ್ಯಮಂತ್ರಿ, ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಆದರೆ ಚುನಾವಣೆಯ ಬಳಿಕದ ಪರಿಸ್ಥಿತಿ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಅವರು ನಿರಾಕರಿಸಿದರು. "ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ, ಅದಕ್ಕೆ ಸಂವಿಧಾನಾತ್ಮಕ ಪ್ರಕ್ರಿಯೆ ಇದೆ. ಚುನಾವಣೆ ಬಳಿಕ ಅದನ್ನು ನಿರ್ಧರಿಸಲಾಗುತ್ತದೆ" ಎಂದು ಹೇಳಿದರು.







