NEET ವಿವಾದ | ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪತ್ರದಲ್ಲೇನಿದೆ?

Photo | PTI
ಹೊಸದಿಲ್ಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ರಾಜಕೀಯ ಸಂಘರ್ಷದ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ ಎರಡು ಪುಟಗಳ ರಾಜೀನಾಮೆ ಪತ್ರದಲ್ಲಿ, ಪರೀಕ್ಷಾ ಬಿಕ್ಕಟ್ಟಿಗೆ ಸರಕಾರದ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡಿರುವ ಅವರು, ವಿದ್ಯಾರ್ಥಿಗಳ ಭವಿಷ್ಯವು ದೀರ್ಘಕಾಲದ ರಾಜಕೀಯ ಮತ್ತು ಕಾನೂನು ಹೋರಾಟಗಳಲ್ಲಿ ಸಿಲುಕಿಕೊಳ್ಳಬಾರದು ಎಂಬ ಮುಖ್ಯ ಆದ್ಯತೆಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
NEET UG 2026ರ ರದ್ದತಿ, ಮರು-ಪರೀಕ್ಷೆ ನಡೆಸಿದ ನಂತರವೂ ವಾರಗಳ ಕಾಲ ಮುಂದುವರಿದ ಪ್ರತಿಭಟನೆಗಳು, ತೀವ್ರಗೊಂಡ ರಾಜಕೀಯ ಒತ್ತಡ ಹಾಗೂ ಹೊಣೆಗಾರಿಕೆಯ ಬೇಡಿಕೆಗಳ ಬೆನ್ನಲ್ಲೇ ಈ ನಿರ್ಣಾಯಕ ಬೆಳವಣಿಗೆ ನಡೆದಿದೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪತ್ರದ ಸಂಪೂರ್ಣ ಪಠ್ಯ:
"ನನ್ನ ಯುವ ಸ್ನೇಹಿತರೇ,
ನಾಲ್ಕು ದಶಕಗಳಿಗೂ ಹೆಚ್ಚು ಕಾಲ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶೈಕ್ಷಣಿಕ ಸುಧಾರಣೆಗಾಗಿ ನನ್ನನ್ನು ನಾನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದೇನೆ. ದೃಢವಾದ, ಸರ್ವಸಮ್ಮತ ಹಾಗೂ ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯೇ ಶಕ್ತಿಯುತ ರಾಷ್ಟ್ರದ ಅಡಿಪಾಯ ಎಂದು ನಾನು ಯಾವಾಗಲೂ ನಂಬಿದ್ದೇನೆ. ದೇಶದ ಯುವ ಸಮುದಾಯದ ಆಕಾಂಕ್ಷೆಗಳು, ಭಾವನೆಗಳು ಮತ್ತು ನ್ಯಾಯಸಮ್ಮತ ನಿರೀಕ್ಷೆಗಳನ್ನು ನಾನು ಆಳವಾಗಿ ಗೌರವಿಸುತ್ತೇನೆ. ಭಾರತದ ಯುವ ಪೀಳಿಗೆಯ ಕನಸುಗಳನ್ನು ನನಸಾಗಿಸುವುದು ನಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನದ ನೈತಿಕ ಬದ್ಧತೆಯಾಗಿದೆ.
ಮಾನ್ಯ ಪ್ರಧಾನ ಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ರಾಷ್ಟ್ರ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಕ್ಕಾಗಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಆದರೂ, ಮೇ 3, 2026ರಂದು ನಡೆದ NEET-UG ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದವು. ಈ ವಿಷಯವನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಿದ ಭಾರತ ಸರಕಾರ ತನಿಖೆಯನ್ನು ಸಿಬಿಐಗೆ ವಹಿಸಿತು. ಪರೀಕ್ಷೆಯನ್ನು ರದ್ದುಗೊಳಿಸಿತು ಹಾಗೂ ಮರು ಪರೀಕ್ಷೆಯ ದಿನಾಂಕವನ್ನು ಘೋಷಿಸಿತು. ಹೆಚ್ಚುವರಿಯಾಗಿ, ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ವಿಧಾನದಲ್ಲಿ ನಡೆಸಲು ನಿರ್ಧರಿಸಲಾಯಿತು.
ಈ ಅವಧಿಯಲ್ಲಿ, 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸುಗಮವಾಗಿ ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ನಾವು 'ಸಂಪೂರ್ಣ ಸರ್ಕಾರಿ' (Whole-of-Government) ವಿಧಾನವನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಿದೆವು; ರಾಜ್ಯ ಸರಕಾರಗಳು - ಹಾಗೂ ನಿರ್ದಿಷ್ಟವಾಗಿ ಜಿಲ್ಲಾಡಳಿತಗಳು - ಕೇಂದ್ರ ಸರಕಾರದೊಂದಿಗೆ ನಿರ್ಣಾಯಕ ಪಾತ್ರ ವಹಿಸಿದವು. ವಿದ್ಯಾರ್ಥಿಗಳು ಮತ್ತು ಪೋಷಕರ ಸಕ್ರಿಯ ಸಹಕಾರದಿಂದ, ಜೂನ್ 21, 2026 ರಂದು ಪರೀಕ್ಷೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು.
ಮೊದಲ ದಿನದಿಂದಲೇ, ನಾನು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡೆ ಹಾಗೂ ಪರಿಸ್ಥಿತಿಯಿಂದ ಎಂದಿಗೂ ಹಿಂದೆ ಸರಿಯಲಿಲ್ಲ. 'ಪರೀಕ್ಷಾ ಮಾಫಿಯಾ'ದಿಂದ ಯಾವುದೇ ಅರ್ಹ ವಿದ್ಯಾರ್ಥಿಯ ಭವಿಷ್ಯ ಹಾಳಾಗಬಾರದು ಮತ್ತು ಯಾರೊಬ್ಬರಿಗೂ ಅನ್ಯಾಯವಾಗಬಾರದು ಎಂದು ದೃಢವಾಗಿ ನಿಶ್ಚಯಿಸಿದೆ. ಜುಲೈ 16ರಂದು ಪ್ರಕಟವಾದ NEET-UG ಫಲಿತಾಂಶಗಳು ತೃಪ್ತಿಕರವಾಗಿದ್ದು, ಹಿಂದುಳಿದ ಹಿನ್ನೆಲೆಯಿಂದ ಬಂದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ್ದಾರೆ.
ಆದರೂ, ಈ ಸವಾಲಿನ ಸಮಯದಲ್ಲಿಯೂ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ವ್ಯಕ್ತಿಗಳು ಅಡೆತಡೆಗಳನ್ನು ಸೃಷ್ಟಿಸಲು ಮತ್ತು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದು ನನಗೆ ತೀವ್ರ ದುಃಖವನ್ನುಂಟುಮಾಡಿದೆ.
ನಮ್ಮ ಪ್ರಜಾಪ್ರಭುತ್ವದ ಶಕ್ತಿಯಲ್ಲಿ ನನಗೆ ಯಾವಾಗಲೂ ಅಚಲ ನಂಬಿಕೆಯಿದೆ ಮತ್ತು ಯುವಕರ ಆಕಾಂಕ್ಷೆಗಳು, ಕನಸುಗಳು ಹಾಗೂ ನಿರೀಕ್ಷೆಗಳನ್ನು ನಾನು ಅತ್ಯಂತ ಗೌರವದಿಂದ ಕಾಣುತ್ತೇನೆ. ಅವರು ಕೇವಲ ಭಾರತದ ಭವಿಷ್ಯವಲ್ಲ; ನವ ಹಾಗೂ ವಿಕಸಿತ ಭಾರತದ ಮುಂಚೂಣಿ ನಾಯಕರು, ನಿರ್ಮಾತೃಗಳು ಮತ್ತು ವಾಸ್ತುಶಿಲ್ಪಿಗಳು. ಕಳೆದ ಹತ್ತು ದಿನಗಳ ಘಟನೆಗಳಿಂದ ನನಗೆ ತೀವ್ರ ನೋವಾಗಿದೆ. ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ. ಭಾರತದ ಯುವ ಶಕ್ತಿಯೇ ಈ ರಾಷ್ಟ್ರದ ನಿಜವಾದ ಅಡಿಪಾಯ. ದೇಶದ ಯುವಕರು ಗೊಂದಲದ ಜಾಲದಲ್ಲಿ ಸಿಲುಕಿಕೊಳ್ಳಬಾರದು ಎಂಬುದೇ ನನ್ನ ಮೂಲ ಸಂಕಲ್ಪ ಎಂದು ಉಲ್ಲೇಖಿಸಿದ್ದಾರೆ.
ಜಂತರ್ ಮಂತರ್ ಮತ್ತು ದೇಶಾದ್ಯಂತ ಇರುವ ಪರಿಸ್ಥಿತಿಯನ್ನು ಪರಿಗಣಿಸಿ - ರಾಷ್ಟ್ರವಿರೋಧಿ ಶಕ್ತಿಗಳು ಇದನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವುದು, ರಾಷ್ಟ್ರೀಯ ಏಕತೆಯನ್ನು ಕಾಪಾಡುವುದು, ಒಬ್ಬ ಭಾರತೀಯ ವಿದ್ಯಾರ್ಥಿಯ ಭವಿಷ್ಯವೂ ಕಾನೂನು ಸಂಕೀರ್ಣತೆಗಳಲ್ಲಿ ಸಿಲುಕಿಕೊಳ್ಳದಂತೆ ನೋಡಿಕೊಳ್ಳುವುದು ಮತ್ತು ನಮ್ಮ ಮಕ್ಕಳು ಅಧ್ಯಯನಕ್ಕೆ ಹಾಗೂ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದಕ್ಕೆ ತಮ್ಮ ಸಮಯವನ್ನು ವಿನಿಯೋಗಿಸಲು ಮತ್ತು ಸಂಪೂರ್ಣ ಗಮನಹರಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ನಾನು ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ.
ಗೌರವಾನ್ವಿತ ಪ್ರಧಾನ ಮಂತ್ರಿಯವರ ಮಾರ್ಗದರ್ಶನ, ನಂಬಿಕೆ ಮತ್ತು ನಿರಂತರ ಬೆಂಬಲಕ್ಕಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನೊಂದಿಗೆ ಕೆಲಸ ಮಾಡಿದ ಕೇಂದ್ರ ಸಂಪುಟದ ಸಚಿವರು, ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ನನಗೆ ಸಿಕ್ಕ ಅವಕಾಶದ ಭಾಗವಾಗಿ ಜೊತೆಯಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು."
ರಾಷ್ಟ್ರ ಸೇವೆಯೇ ನನ್ನ ಜೀವನದ ಅತ್ಯುನ್ನತ ಆದ್ಯತೆಯಾಗಿದ್ದು, ನಾನು ಯಾವಾಗಲೂ ಈ ಉದ್ದೇಶಕ್ಕಾಗಿ ಸಮರ್ಪಿತನಾಗಿರುತ್ತೇನೆ. ಭಗವಾನ್ ಜಗನ್ನಾಥನ ಆಶೀರ್ವಾದದೊಂದಿಗೆ, ಭವಿಷ್ಯದಲ್ಲಿ ಭಾರತ ಮಾತೆ, ಒಡಿಶಾದ ಜನತೆ ಮತ್ತು ದೇಶದ ಯುವಕರ ಆಕಾಂಕ್ಷೆಗಳನ್ನು ಈಡೇರಿಸಲು ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ನಾನು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ.
ಇಂತಿ ನಿಮ್ಮ,
ಧರ್ಮೇಂದ್ರ ಪ್ರಧಾನ್"






