NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ | 13 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ CBI

ಹೊಸದಿಲ್ಲಿ, ಜು. 29: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ 13 ಮಂದಿ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದೆ. ಬಂಧಿತರೆಲ್ಲರೂ ಪ್ರಸ್ತುತ ಬಂಧನದಲ್ಲಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷಾ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ‘ಕಾಕ್ರೋಚ್ ಜನತಾ ಪಾರ್ಟಿ’ ನೇತೃತ್ವದಲ್ಲಿ ಸುಮಾರು ಎರಡು ತಿಂಗಳ ಕಾಲ ನಡೆದ ಪ್ರತಿಭಟನೆಯ ನಂತರ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವು ದಿನಗಳ ಬಳಿಕ ಈ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.
ಆರೋಪ ಪಟ್ಟಿಯಲ್ಲಿ ಹೆಸರಿಸಲಾದವರಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಮೂವರು ವಿಷಯ ತಜ್ಞರೂ ಸೇರಿದ್ದಾರೆ. ಆರೋಪ ಪಟ್ಟಿಯಲ್ಲಿ ಹೆಸರಿಸಲಾದ ತಜ್ಞರೆಂದರೆ ರಸಾಯನಶಾಸ್ತ್ರ ತಜ್ಞ ಪಿ.ವಿ. ಕುಲಕರ್ಣಿ, ಜೀವಶಾಸ್ತ್ರ ತಜ್ಞೆ ಮನೀಷ್ ಗುರುನಾಥ್ ಮಂಧಾರೆ ಮತ್ತು ಭೌತಶಾಸ್ತ್ರ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್.
ನೀಟ್ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಉನ್ನತ ಶಿಕ್ಷಣ ಇಲಾಖೆ 2026 ಮೇ 3ರಂದು ದೂರು ನೀಡಿತ್ತು. ಈ ದೂರಿನ ಆಧಾರದಲ್ಲಿ ಸಿಬಿಐ ಮೇ 12ರಂದು ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ವರದಿಗಳ ಹಿನ್ನೆಲೆಯಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮೇ 12ರಂದು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಅನಂತರ ಜೂನ್ 21ರಂದು ಮರು ಪರೀಕ್ಷೆ ನಡೆಸಿದ್ದು, ಜುಲೈ 16ರಂದು ಫಲಿತಾಂಶ ಪ್ರಕಟಿಸಿತ್ತು.






