NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿಯಿಂದ ಆನ್ಲೈನ್ ಅಭಿಯಾನ

ಧರ್ಮೇಂದ್ರ ಪ್ರಧಾನ್ , ಅಭಿಜೀತ್ ದೀಪ್ಕೆ | Photo Credit : indiatoday.in
ಹೊಸದಿಲ್ಲಿ, ಮೇ 22: NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷವು ಆನ್ಲೈನ್ ಅರ್ಜಿ ಅಭಿಯಾನ ಆರಂಭಿಸಿದೆ.
ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಬಿಡುಗಡೆ ಮಾಡಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. “ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆಯ ಮೇಲೆ ಒತ್ತಡ ತರಬೇಕು” ಎಂದು ಅವರು ಹೇಳಿದ್ದಾರೆ.
NEET-UG ವಿವಾದವು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ ಎಂದು ದೀಪ್ಕೆ ಆರೋಪಿಸಿದ್ದಾರೆ. “ಇದು ಕೇವಲ ಪರೀಕ್ಷಾ ಅವ್ಯವಸ್ಥೆಯ ವಿಷಯವಲ್ಲ; ಶಿಕ್ಷಣ ವ್ಯವಸ್ಥೆಯ ವೈಫಲ್ಯದ ಪ್ರತಿಬಿಂಬ” ಎಂದು ಅವರು ಹೇಳಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಮತ್ತು ಅದರ ಬಳಿಕ ಉಂಟಾದ ಅನಿಶ್ಚಿತತೆಯಿಂದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿವೆ ಎಂದು ಅವರು ಹೇಳಿದ್ದಾರೆ. ಅನೇಕ ವಿದ್ಯಾರ್ಥಿಗಳು ಆತಂಕ, ನಿರಾಶೆ ಅನುಭವಿಸುತ್ತಿದ್ದಾರೆ ಮತ್ತು ಮಾನಸಿಕವಾಗಿ ಕುಗ್ಗಿದ್ದಾರೆ. ಪರೀಕ್ಷಾ ಒತ್ತಡಕ್ಕೆ ಸಂಬಂಧಿಸಿದ ಆತ್ಮಹತ್ಯೆ ಪ್ರಕರಣಗಳು ದೇಶವ್ಯಾಪಿ ಕಳವಳಕ್ಕೆ ಕಾರಣವಾಗಿವೆ ಎಂದೂ ಅವರು ಉಲ್ಲೇಖಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಬಿಡುಗಡೆ ಮಾಡಿದ ವಿಡಿಯೊದಲ್ಲಿ, “22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ತಳ್ಳಿರುವುದು ವ್ಯವಸ್ಥೆಯ ದೋಷ” ಎಂದು ಹೇಳಿದ ದೀಪ್ಕೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
NEET-UG ವಿವಾದಕ್ಕೆ ಸಂಬಂಧಿಸಿ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಉನ್ನತ ಮಟ್ಟದಲ್ಲಿ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ದೀಪ್ಕೆ ಆರೋಪಿಸಿದ್ದಾರೆ. ವಿದ್ಯಾರ್ಥಿಗಳ ವಿಶ್ವಾಸ ಮರುಸ್ಥಾಪಿಸಲು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
NEET-UG 2026 ವಿವಾದವು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಈ ಅಭಿಯಾನ ಆರಂಭವಾಗಿದೆ. ಸರ್ಕಾರ ಮರುಪರೀಕ್ಷೆ ಘೋಷಿಸಿದ್ದು, ಪರೀಕ್ಷಾ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಒಪ್ಪಿಕೊಂಡಿರುವುದನ್ನೂ ದೀಪ್ಕೆ ಉಲ್ಲೇಖಿಸಿದ್ದಾರೆ.
ಪರೀಕ್ಷಾ ನಿರ್ವಹಣೆ, ಶಿಕ್ಷಣ ಸುಧಾರಣೆಗಳು ಮತ್ತು ಯುವಜನರಿಗೆ ಉದ್ಯೋಗಾವಕಾಶಗಳ ವಿಷಯದಲ್ಲಿಯೂ ಕೇಂದ್ರ ಸರ್ಕಾರವನ್ನು ಅವರು ಟೀಕಿಸಿದ್ದಾರೆ. ಸಿಬಿಎಸ್ಇ ಮರುಪರೀಕ್ಷಾ ಶುಲ್ಕದ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ವಿದ್ಯಾರ್ಥಿಗಳ ಆತಂಕ ಮತ್ತು ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಹರಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.






