ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಗಿಂತ ನೆಹರೂ ಕೊಡುಗೆ ಹೆಚ್ಚು ; ಸುಧೀಂದ್ರ ಕುಲಕರ್ಣಿ
ವಿವಾದಕ್ಕೆ ಕಾರಣವಾದ ಅಡ್ವಾಣಿ ಅವರ ಮಾಜಿ ಆಪ್ತನ ಹೇಳಿಕೆ
ಸುಧೀಂದ್ರ ಕುಲಕರ್ಣಿ | X \ @SudheenKulkarni
ಹೊಸದಿಲ್ಲಿ: ಸಂವಿಧಾನ ರಚನೆಯಲ್ಲಿ ಬಿ.ಆರ್. ಅಂಬೇಡ್ಕರ್ ಅವರಿಗಿಂತ ಹೆಚ್ಚು ಭಾರತದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರೂ ಅವರು ಕೊಡುಗೆ ನೀಡಿದ್ದಾರೆ ಎಂದು ಪ್ರತಿಪಾದಿಸುವ ಲೇಖನದ ಮೂಲಕ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಮಾಜಿ ಆಪ್ತ ಸುಧೀಂದ್ರ ಕುಲಕರ್ಣಿ ಶನಿವಾರ ವಿವಾದ ಹುಟ್ಟ ಹಾಕಿದ್ದಾರೆ.
ಸುದ್ದಿ ಸಂಸ್ಥೆಯೊಂದು ಪ್ರಕಟಿಸಿದ ಲೇಖನವನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದರು. ಈಗ ಆ ಪೋಸ್ಟ್ ಅನ್ನು ಅಳಿಸಿದ್ದಾರೆ. ಆದರೆ, ಈ ಪೋಸ್ಟ್ ಈಗ ವಿವಾದಕ್ಕೆ ಕಾರಣವಾಗಿದೆ. ಇದು ದಲಿತರು ಹಾಗೂ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳಿದೆ.
ದಲಿತರು ಹಾಗೂ ಅಂಬೇಡ್ಕರ್ ಕುರಿತು ಕಾಂಗ್ರೆಸ್ನ ದ್ವೇಷ ಹೊಸತಲ್ಲ. ಕಾಂಗ್ರೆಸ್ ಈ ಲೇಖನವನ್ನು ಅನುಮೋದಿಸುವ ಮೂಲಕ ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವರು ಸೇರಿದಂತೆ ಬಿಜೆಪಿಯ ನಾಯಕರು ಆರೋಪಿಸಿದ್ದಾರೆ.
ಸಂವಿಧಾನ ರಚನೆಗೆ ಅಂಬೇಡ್ಕರ್ಗಿಂತ ಹೆಚ್ಚಿನ ಕೊಡುಗೆ ನೀಡಿದವರು ನೆಹರೂ ಎಂದು ಪಿತ್ರೋಡಾ ಪ್ರತಿಪಾದಿಸಿದ್ದಾರೆ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೆ, ಅವರ ಪ್ರತಿಪಾದನೆಯನ್ನು ಕಾಂಗ್ರೆಸ್ ಒಪ್ಪಿಕೊಳ್ಳುತ್ತದೆಯೇ ಎಂದು ಪ್ರಶ್ನಿಸುತ್ತೇವೆ. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರು ಪ್ರಧಾನ ಪಾತ್ರ ವಹಿಸಿದ್ದಾರೆ ಎಂದು ಸಂಪೂರ್ಣ ಜಗತ್ತು ನಂಬಿದೆ. ಪಿತ್ರೋಡಾ ಅವರ ಪ್ರತಿಪಾದನೆ ಬಾಬಾ ಸಾಹೇಬ್ ಕುರಿತ ಕಾಂಗ್ರೆಸ್ ಮನಸ್ಥಿತಿಯನ್ನು ಬಿಂಬಿಸಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಲ್ ಹೇಳಿದ್ದಾರೆ.
‘‘ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಹಾಗೂ ದಲಿತ ವಿರೋಧಿ. ಕಾಂಗ್ರೆಸ್ ನ ದಲಿತ ವಿರೋಧಿ ಚಿಂತನೆ ಮತ್ತೊಮ್ಮೆ ಬಹಿರಂಗಗೊಂಡಿದೆ’’ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನಾವಲ್ಲಾ ಅವರು ಹೇಳಿದ್ದಾರೆ.
ಪಿತ್ರೋಡಾ ಅವರ ಹೇಳಿಕೆಯನ್ನು ‘ಸುಳ್ಳು’ ಎಂದು ಕರೆದ ಪೂನಾವಲ್ಲ, ಇದು ನಿಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ‘ಮನ್ ಕಿ ಬಾತ್’ ಅಲ್ಲವೇ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಡಳಿತದ ಸಂದರ್ಭ ದಲಿತರು ಹಾಗೂ ಬುಡಕಟ್ಟು ಜನರು ಅತ್ಯಧಿಕ ದೌರ್ಜನ್ಯ ಎದುರಿಸಿದ್ದಾರೆ ಎಂದು ಪ್ರತಿಪಾದಿಸಿದ ಅವರು, ಇನ್ನು ಎಷ್ಟು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರು ಅವಮಾನ ಎದುರಿಸಬೇಕು ಎಂದು ಪ್ರಶ್ನಿಸಿದ್ದಾರೆ.