ಮೋದಿ ಆಹ್ವಾನ ಸ್ವೀಕರಿಸಿ ಭಾರತ ಭೇಟಿಗೆ ನೇಪಾಳ ಪ್ರಧಾನಿ ನಿರ್ಧಾರ

PC: x.com/IndiaStrikes_
ಹೊಸದಿಲ್ಲಿ: ದೇಶದಲ್ಲಿ ವಿಐಪಿ ಸಂಸ್ಕೃತಿ, ಕ್ಯಾಂಪಸ್ ಮತ್ತು ಆಡಳಿತ ವ್ಯವಸ್ಥೆಯಲ್ಲಿ ರಾಜಕೀಯ ಪ್ರಭಾವ, ಸಾರ್ವಜನಿಕ ಸೇವೆಯಲ್ಲಿ ವಿಳಂಬ, ಬಡವರಿಗೆ ಉಚಿತ ಆರೋಗ್ಯ ಸೌಲಭ್ಯ, ಮಹಿಳೆಯರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಮತ್ತು ಪುಟ್ಟ ಮಕ್ಕಳಿಗೆ ಒತ್ತಡ ರಹಿತ ಶಿಕ್ಷಣಸೌಲಭ್ಯವನ್ನು ಗುರಿ ಮಾಡಿ 100 ಅಂಶಗಳ ಕ್ರಾಂತಿಕಾರಿ ಆಡಳಿತ ಕಾರ್ಯಸೂಚಿಗೆ ಚಾಲನೆ ನೀಡಿದ ಬೆನ್ನಲ್ಲೇ ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಆಹ್ವಾನವನ್ನು ಸ್ವೀಕರಿಸಿ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ.
"ಭಾರತದ ಆಹ್ವಾನವನ್ನು ನೇಪಾಳ ಸರ್ಕಾರ ಸ್ವೀಕರಿಸಿದೆ. ಉಭಯ ದೇಶಗಳ ವಿದೇಶಾಂಗ ಸಚಿವಾಲಯಗಳು ಬಲೇಂದ್ರ ಭೇಟಿಗೆ ಅಗತ್ಯ ಸಿದ್ಧತೆಗಳನ್ನು ಆರಂಭಿಸಿವೆ. ಬಲೇಂದ್ರ ಶಾ ಅವರು ಅಧಿಕಾರ ವಹಿಸಿಕೊಂಡ ಬಳಿಕ ಇದು ಮೊಟ್ಟಮೊದಲ ವಿದೇಶಿ ಭೇಟಿಯಾಗಲಿದೆ ಎಂದು ಮೂಲಗಳು ಹೇಳಿವೆ. ನೇಪಾಳದ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ 2023ರ ಜೂನ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದು, ಇದು ನೇಪಾಳ ಪ್ರಧಾನಿಯ ಕೊನೆಯ ಭಾರತ ಭೇಟಿಯಾಗಿತ್ತು.
ಏತನ್ಮಧ್ಯೆ ದೇಶದಲ್ಲಿ ಕ್ರಾಂತಿಕಾರಿ ಆಡಳಿತಾತ್ಮಕ ಬದಲಾವಣೆಗಳನ್ನು ತರಲು ಹೊಸ ಸರ್ಕಾರ ಮುಂದಾಗಿದ್ದು, ಕೇಂದ್ರೀಯ ಸಚಿವಾಲಯಗಳ ಸಂಖ್ಯೆಯಲ್ಲಿ ಕಡಿತ, ಸರ್ಕಾರಿ ಆಡಳಿತ ಯಂತ್ರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ, ಪಕ್ಷಪಾತ ರಹಿತ ವೇದಿಕೆಗಾಗಿ ರಾಜಕೀಯ ನಂಟು ರಹಿತವಾದ ವಿದ್ಯಾರ್ಥಿ ಸಂಘಟನೆಗಳ ಸ್ಥಾಪನೆಯಂಥ ನಿರ್ಧಾರಗಳನ್ನು ಕೈಗೊಂಡಿದೆ.
ಶಿಕ್ಷಣ ಮತ್ತು ನಾಗರಿಕ ಸೇವೆಗಳಲ್ಲಿ ರಾಜಕೀಯ ಪ್ರಭಾವವನ್ನು ಕೊನೆಗೊಳಿಸುವ ಗುರಿಯನ್ನು ಈ ಸುಧಾರಣೆಗಳು ಹೊಂದಿವೆ. ಹೊಸ ಯೋಜನೆಯ ಪ್ರಕಾರ ಶಾಲೆ- ಕಾಲೇಜುಗಳಲ್ಲಿ ಇರುವ ರಾಜಕೀಯ ಪಕ್ಷಗಳ ಜತೆ ಸಂಪರ್ಕ ಹೊಂದಿರುವ ವಿದ್ಯಾರ್ಥಿ ಸಂಘಟನೆಗಳನ್ನು 90 ದಿನಗಳ ಒಳಗಾಗಿ ವಿಸರ್ಜಿಸಿ, ಪಕ್ಷ ರಹಿತವಾದ ವಿದ್ಯಾರ್ಥಿ ಧ್ವನಿಗೆ ವೇದಿಕೆ ಒದಗಿಸುವ ಸಂಘಟನೆಗಳನ್ನು ರಚಿಸಬೇಕಾಗುತ್ತದೆ.






