ನೇತಾಜಿ ಜನ್ಮದಿನಾಚರಣೆ : ರಾಹುಲ್ ನಮನ
ರಾಹುಲ್ ಗಾಂಧಿ| Photo : @RahulGandhi \ X
ಜೋರಾಬಾಟ್ : ನೇತಾಜಿ ಸುಭಾಶ್ಚಂದ್ರ ಭೋಸ್ ಅವರ ಜನ್ಮದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯ ಸೇನಾನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನೇತಾಜಿ ಅವರು ಭಾರತೀಯ ಮೌಲ್ಯಗಳಾದ ಬಹುತ್ವ ಹಾಗೂ ಸಹಿಷ್ಣುತೆಗೆ ಅಗ್ರಪಂಕ್ತಿಯ ಉದಾಹರಣೆಯಾಗಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ನಡೆಸುತ್ತಿರುವ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯು ಸೋಮವಾರ ರಾತ್ರಿ ಮೇಘಾಲಯದ ಜೋರಾಬಾಟ್ ನಲ್ಲಿ ವಿಶ್ರಾಂತಿ ಪಡೆದಿತ್ತು.
ನ್ಯಾಯಯಾತ್ರೆ ಶಿಬಿರದಲ್ಲಿ ನೇತಾಜಿ ಅವರ ಛಾಯಾಚಿತ್ರಕ್ಕೆ ರಾಹುಲ್ ಮತ್ತಿತರ ಕಾಂಗ್ರೆಸ್ ಮುಖಂಡರು ಪುಷ್ಪಾರ್ಚನೆಗೈದರು.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು ‘‘ ನೇತಾಜಿ ಸುಭಾಶ್ಚಂದ್ರ ಭೋಸ್ ಅವರ 127ನೇ ಜನ್ಮದಿನಾಚರಣೆಯಂದು ನಮ್ಮ ಹೃದಯಪೂರ್ವಕ ಶ್ರದ್ಧಾಂಜಲಿಗಳು. ನೇತಾಜಿ ಅವರ ಇಂಡಿಯನ್ ನ್ಯಾಶನಲ್ ಆರ್ಮಿ (ಐಎನ್ಎ) ಯ ಗಾಂಧಿ, ನೆಹರೂ, ಆಝಾದ್, ಸುಭಾಶ್ ಹಾಗೂ ರಾಣಿ ಝಾನ್ಸಿ ಬ್ರಿಗೇಡ್ ಗಳು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಮಗ್ರವಾದ ಪಾತ್ರವನ್ನು ವಹಿಸಿವೆ. ಭಾರತೀಯ ಮೌಲ್ಯಗಳಾದ ಬಹುತ್ವವಾದ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ, ಸಹಿಷ್ಣುತೆ ಹಾಗೂ ಲಿಂಗ ಸಮಾನತೆಗೆ ಮುಂಚೂಣಿಯ ಉದಾಹರಣೆಯಾಗಿದ್ದಾರೆ ’’ ಎಂದು ಹೇಳಿದ್ದಾರೆ.