ಹೊಸದಿಲ್ಲಿ: ಪಾರ್ಟಿ ವೇಳೆ ಅಪಾರ್ಟ್ಮೆಂಟ್ ಕುಸಿತ; ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣೆಗೆ ಕಾರ್ಯಾಚರಣೆ

PC: x.com/NDTVMarathi
ಹೊಸದಿಲ್ಲಿ: ಪೂರ್ವ ವಿರಾರ್ ಪ್ರದೇಶದಲ್ಲಿರುವ ರಮಾಬಾಯಿ ಅಪಾರ್ಟ್ಮೆಂಟ್ ನ ಒಂದು ಭಾಗ ಬುಧವಾರ ಮಧ್ಯರಾತ್ರಿ ಬಳಿಕ ಕುಸಿದಿದ್ದು, ಸುಮಾರು 15-20 ಮಂದಿ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಆ್ಯಂಬುಲೆನ್ಸ್ ಗಳೊಂದಿಗೆ ಆಗಮಿಸಿದ್ದು, ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಲು ಸಮರೋಪಾದಿ ಕಾರ್ಯಾಚರಣೆ ನಡೆಯುತ್ತಿದೆ.
ಎರಡು ವಿಭಾಗಗಳನ್ನು ಒಳಗೊಂಡಿರುವ ಅಪಾರ್ಟ್ಮೆಂಟಿನ ಒಂದು ವಿಭಾಗದ ನಾಲ್ಕನೇ ಮಹಡಿಯಲ್ಲಿ ಒಂದು ವರ್ಷದ ಬಾಲಕಿಯ ಹುಟ್ಟುಹಬ್ಬದ ಸಂತೋಷಕೂಟ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಆದ್ದರಿಂದ ಸಿಕ್ಕಿಹಾಕಿಕೊಂಡವರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದುವರೆಗೆ ಐದು ಮಂದಿಯನ್ನು ಅವಶೇಷಗಳ ಅಡಿಯಿಂದ ಹೊರತೆಗೆದು ವಿವಿಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿಯಲ್ಲಿ 15-20 ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಇದುವರೆಗೆ ಯಾವುದೇ ಸಾವು ನೋವಿನ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮತ್ತಷ್ಟು ಹಾನಿಯನ್ನು ತಪ್ಪಿಸುವ ಸಲುವಾಗಿ ಕಟ್ಟಡದ ಮತ್ತೊಂದು ವಿಭಾಗದ ನಿವಾಸಿಗಳನ್ನೂ ತೆರವುಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಹಾನಿಯ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







