ಜಿನ್ನಾ, ಕಾಂಗ್ರೆಸ್, ಮೌಂಟ್ ಬ್ಯಾಟನ್ ದೇಶ ವಿಭಜನೆಯ ಅಪರಾಧಿಗಳು : ವಿವಾದಕ್ಕೆ ಕಾರಣವಾದ ಎನ್‌ಸಿಇಆರ್‌ಟಿಯ ವಿಶೇಷ ಪಠ್ಯ

ಹೊಸದಿಲ್ಲಿ : ಭಾರತ ಪಾಕಿಸ್ತಾನ ವಿಭಜನೆಗೆ ಯಾರು ಹೊಣೆ? ಕನಿಷ್ಠ 6,00,000 ಜನರ ಪ್ರಾಣಹಾನಿಗೆ ಮತ್ತು 15 ಮಿಲಿಯನ್ ಜನರನ್ನು ಸ್ಥಳಾಂತರಕ್ಕೆ ಕಾರಣವಾದ ಮಾನವೀಯ ದುರಂತದ ಅಪರಾಧಿಗಳು ಯಾರು? ಎಂದು ಹೇಳುವ ಎನ್ ಸಿ ಇಆರ್ ಟಿಯ ಹೊಸ ಮಾಡ್ಯೂಲ್(ವಿಶೇಷ ಪಠ್ಯ) ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸತ್ಯವನ್ನು ಹೇಳದ ಕಾರಣ ಈ ವಿಶೇಷ ಪಠ್ಯವನ್ನು ಸುಟ್ಟು ಹಾಕುವಂತೆ ಆಗ್ರಹಿಸಿದೆ.
“Partition Horrors Remembrance Day” ಎಂಬ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ ಸಿ ಇಆರ್ ಟಿ) ರಚಿಸಿದ ಹೊಸ ವಿಶೇಷ ಪಠ್ಯ ವಿಭಜನೆಗೆ ಮೂವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಮೊದಲನೆಯದಾಗಿ ವಿಭಜನೆಗೆ ಒತ್ತಾಯಿಸಿದ ಜಿನ್ನಾ, ಎರಡನೆಯದಾಗಿ ಅದನ್ನು ಒಪ್ಪಿಕೊಂಡ ಕಾಂಗ್ರೆಸ್ ಮತ್ತು ಮೂರನೆಯದಾಗಿ ಅದನ್ನು ಜಾರಿಗೆ ತಂದ ಮೌಂಟ್ ಬ್ಯಾಟನ್ ಅವರನ್ನು ಮಾಡ್ಯೂಲ್ ನಲ್ಲಿ ಹೊಣೆಗಾರರು ಎಂದು ಹೇಳಿದೆ.
"ವಿಭಜನೆಗೆ ಹೊಣೆಗಾರರು" ಎಂಬ ಶೀರ್ಷಿಕೆಯ ಅಡಿಯಲ್ಲಿ ಎನ್ ಸಿಇಆರ್ ಟಿ (NCERT) ಬಿಡುಗಡೆ ಮಾಡಿದ ಮಾಡ್ಯೂಲ್ ನಲ್ಲಿ ಮಾಜಿ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರು ಜುಲೈ 1947ರಲ್ಲಿ ಮಾಡಿದ ಭಾಷಣದ ಒಂದು ತುಣುಕನ್ನು ಕೂಡ ಸೇರಿಸಲಾಗಿದೆ. ಅವರು ಭಾಷಣದಲ್ಲಿ, “ಈಗ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು ವಿಭಜನೆಯನ್ನು ಒಪ್ಪಿಕೊಳ್ಳುವುದು ಅಥವಾ ನಿರಂತರ ಸಂಘರ್ಷ ಮತ್ತು ಗೊಂದಲವನ್ನು ಎದುರಿಸುವುದು. ವಿಭಜನೆ ಕೆಟ್ಟದ್ದೇ ಸರಿ. ಆದರೆ ಏಕತೆಗೆ ಬೇಕಾದ ಬೆಲೆ ಏನೇ ಇರಲಿ, ಅಂತರ್ ಯುದ್ಧದ ಪ್ರಭಾವ ಹೆಚ್ಚಾಗಿರುತ್ತದೆ” ಎಂದು ಹೇಳಿರುವ ಬಗ್ಗೆ ಉಲ್ಲೇಖಿಸಲಾಗಿದೆ.
"ಭಾರತವು ಯುದ್ಧಭೂಮಿಯಾಗಿ ಮಾರ್ಪಟ್ಟಿತ್ತು ಮತ್ತು ಅಂತರ್ಯುದ್ಧಕ್ಕಿಂತ ದೇಶವನ್ನು ವಿಭಜಿಸುವುದು ಉತ್ತಮ” ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಹೇಳಿರುವ ಬಗ್ಗೆ ಮಾಡ್ಯೂಲ್ ನಲ್ಲಿ ಉಲ್ಲೇಖಿಸಲಾಗಿದೆ.
ಎನ್ ಸಿ ಇಆರ್ ಟಿ (NCERT) ಮಾಡ್ಯೂಲ್‌ನಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ತೀವ್ರವಾಗಿ ಟೀಕಿಸಲಾಗಿದೆ. ಅವರು ಮೊದಲಿಗೆ ಅಧಿಕಾರ ಹಸ್ತಾಂತರ ದಿನಾಂಕವನ್ನು ಜೂನ್ 1948 ಎಂದು ಘೋಷಿಸಿದ್ದರು. ಆದರೆ, ನಂತರ ಆಗಸ್ಟ್ 1947ಕ್ಕೆ ಅಧಿಕಾರ ಹಸ್ತಾಂತರಿಸಿದರು ಎಂದು ಉಲ್ಲೇಖಿಸಲಾಗಿದೆ.
ಈ ಮಾಡ್ಯೂಲ್ ಪಠ್ಯಪುಸ್ತಕದ ಭಾಗವಲ್ಲ, ಪ್ರತ್ಯೇಕವಾಗಿ ಹೊರತಂದ ಚಿಕ್ಕ ಪ್ರಕಟನೆಯಾಗಿದೆ. ಸಾಮಾನ್ಯ ಪಠ್ಯಪುಸ್ತಕಗಳ ಹೊರತಾಗಿ, ಒಂದು 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮತ್ತು ಮತ್ತೊಂದು 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾಗಿದೆ.
ಕಾಂಗ್ರೆಸ್ ಪಕ್ಷವು NCERTಯ ವ್ಯಾಖ್ಯಾನವನ್ನು ಟೀಕಿಸಿದೆ. ಪಕ್ಷದ ವಕ್ತಾರ ಪವನ್ ಖೇರಾ ಈ ಕುರಿತು ಪ್ರತಿಕ್ರಿಯಿಸಿ, "ಈ ದಾಖಲೆಯನ್ನು ಸುಟ್ಟುಹಾಕಿ ಏಕೆಂದರೆ ಅದು ಸತ್ಯವನ್ನು ಹೇಳುವುದಿಲ್ಲ. ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ವಿಭಜನೆಗೆ ಕಾರಣ ಎಂದು ಹೇಳಿದರು.
"ಆರೆಸ್ಸೆಸ್ ಈ ರಾಷ್ಟ್ರಕ್ಕೆ ಅಪಾಯಕಾರಿ. ವಿಭಜನೆಯ ಕಲ್ಪನೆಯನ್ನು ಮೊದಲು ಹಿಂದೂ ಮಹಾಸಭಾ 1938ರಲ್ಲಿ ಪ್ರಚಾರ ಮಾಡಿತು. ಇದನ್ನು ಜಿನ್ನಾ 1940ರಲ್ಲಿ ಪುನರಾವರ್ತಿಸಿದರು" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
NCERTಯ ವಿಭಜನಾ ಮಾಡ್ಯೂಲ್ ಇದೀಗ ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಭಾರತದ ವಿಭಜನೆಗೆ ಯಾರು ಕಾರಣರು ಮತ್ತು ಭಾರತದ ಇತಿಹಾಸವನ್ನು ತರಗತಿಗಳಲ್ಲಿ ಹೇಗೆ ಕಲಿಸಬೇಕು ಎಂಬುದರ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.







