ಜನನ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ: ಹೊಸ ಪಾಸ್ಪೋರ್ಟ್ ನಿಯಮಗಳಲ್ಲಿ ಏನೆಲ್ಲಾ ಬದಲಾವಣೆಯಾಗಿದೆ?

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಸ್ಪೋರ್ಟ್ ಕಾಯ್ದೆ 1967ರ ಸೆಕ್ಷನ್ 24ಕ್ಕೆ ತಿದ್ದುಪಡಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಜನನ ದಿನಾಂಕ ಪರಿಶೀಲನೆಗೆ ಅಗತ್ಯವಾದ ದಾಖಲೆಯನ್ನು ಬದಲಾಯಿಸಿದೆ.
ಪಾಸ್ಪೋರ್ಟ್ ಅರ್ಜಿ ಸಲ್ಲಿಕೆಗೆ ಜನನ ಪ್ರಮಾಣಪತ್ರ ಕಡ್ಡಾಯ!
ಈ ಮೊದಲು ಪಾಸ್ಪೋರ್ಟ್ ಗೆ ಜನನ ದಿನಾಂಕ ದೃಢಪಡಿಸಲು ಹಲವಾರು ದಾಖಲೆಗಳನ್ನು ಬಳಸಬಹುದಾಗಿತ್ತು. ಆದರೆ, 2023ರ ಅಕ್ಟೋಬರ್ 1ರ ಬಳಿಕ ಜನಿಸಿದವರಿಗೆ ಜನನ ಪ್ರಮಾಣಪತ್ರವೇ ಏಕೈಕ ಮಾನ್ಯ ದಾಖಲೆ ಆಗಲಿದೆ. ಈ ಪ್ರಮಾಣಪತ್ರವನ್ನು ಮಹಾನಗರ ಪಾಲಿಕೆ, ಜನನ ಮತ್ತು ಮರಣ ನೋಂದಣಾಧಿಕಾರಿ, ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ-1969ರ ಅಡಿಯಲ್ಲಿ ಮಾನ್ಯತೆ ಪಡೆದ ಪ್ರಾಧಿಕಾರ ನೀಡಿದಾಗ ಮಾತ್ರ ಮಾನ್ಯವಾಗುತ್ತದೆ.
ಆದರೆ, ಅಕ್ಟೋಬರ್ 1, 2023ರ ಮೊದಲು ಜನಿಸಿದವರಿಗೆ ಹಳೆಯ ನಿಯಮವೇ ಜಾರಿಯಲ್ಲಿ ಇರಲಿದೆ. ಅವರು ಜನನದ ದಿನಾಂಕ ದೃಢೀಕರಿಸಲು ಸರಕಾರಿ ನೌಕರರ ದಾಖಲೆಗಳ ಪ್ರತಿಗಳು, ಪಾನ್ ಕಾರ್ಡ್, ಚಾಲನಾ ಪರವಾನಿಗೆ, ಶಾಲಾ ಪ್ರಮಾಣಪತ್ರ, ಹತ್ತನೇ ತರಗತಿಯ ಪ್ರಮಾಣಪತ್ರದಂತಹ ದಾಖಲೆಗಳನ್ನು ಬಳಸಬಹುದಾಗಿದೆ.
ಮನೆ ವಿಳಾಸ ಪಾಸ್ಪೋರ್ಟ್ನಲ್ಲಿ ಇರಲ್ಲ!
ಹಿಂದೆ ಪಾಸ್ಪೋರ್ಟ್ನ ಕೊನೆಯ ಪುಟದಲ್ಲಿ ಮನೆ ವಿಳಾಸ ಮುದ್ರಿಸಲಾಗುತ್ತಿತ್ತು. 2025ರ ಹೊಸ ಪಾಸ್ಪೋರ್ಟ್ ನಿಯಮಗಳಲ್ಲಿ ಅದನ್ನು ಕೈಬಿಡಲಾಗಿದೆ. ಈಗ, ಮನೆ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿ ಪಾಸ್ಪೋರ್ಟ್ನಲ್ಲಿ ಡಿಜಿಟಲ್ ಬಾರ್ಕೋಡ್ನಲ್ಲಿರಲಿದೆ. ಇಮಿಗ್ರೇಷನ್ ಅಧಿಕಾರಿಗಳು ಈ ಬಾರ್ಕೋಡ್ ನ್ನು ಸ್ಕ್ಯಾನ್ ಮಾಡಬಹುದು. ಇದು ಗೌಪ್ಯತೆ ಮತ್ತು ಸುರಕ್ಷತೆ ಹೆಚ್ಚಿಸುವುದಕ್ಕೆ ಸಹಾಯ ಮಾಡಲಿದೆ.
ಹೊಸ ಕಲರ್ ಕೋಡ್
ಪಾಸ್ಪೋರ್ಟ್ಗಳನ್ನು ಸುಲಭವಾಗಿ ಗುರುತಿಸಲು ಹೊಸ ಬಣ್ಣದ ಕೋಡ್ ವ್ಯವಸ್ಥೆ ಜಾರಿಗೆ ಬಂದಿದೆ. ಸರಕಾರಿ ಅಧಿಕಾರಿಗಳಿಗೆ ಬಿಳಿ ಮುಖಪುಟದ ಪಾಸ್ಪೋರ್ಟ್, ರಾಜತಾಂತ್ರಿಕರಿಗೆ ಕೆಂಪು ಮುಖಪುಟದ ಪಾಸ್ಪೋರ್ಟ್, ಸಾಮಾನ್ಯ ನಾಗರಿಕರಿಗೆ ಈಗಿರುವಂತೆಯೇ ನೀಲಿ ಬಣ್ಣದ ಮುಖಪುಟದ ಪಾಸ್ಪೋರ್ಟ್ ಸಿಗಲಿದೆ. ಈ ಬದಲಾವಣೆಯು ಪಾಸ್ಪೋರ್ಟ್ ಗುರುತಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಹಾಯ ಮಾಡಲಿದೆ
ಇದಲ್ಲದೆ ಪಾಸ್ಪೋರ್ಟ್ನಲ್ಲಿ ಪೋಷಕರ ಹೆಸರನ್ನು ಕೊನೆಯ ಪುಟದಲ್ಲಿ ಮುದ್ರಿಸುವ ನಿಯಮವನ್ನು ತೆಗೆದುಹಾಕಲಾಗಿದೆ. ಈ ಬದಲಾವಣೆ ಗೌಪ್ಯತೆ ಹೆಚ್ಚಿಸುವ ಜೊತೆಗೆ, ಒಬ್ಬ ಪೋಷಕರ ಅಂದ್ರೆ single-parent ಜೊತೆ ಬೆಳೆದು ಬಂದವರಿಗೆ ಅಥವಾ ವಿಚ್ಛೇದಿತ ಕುಟುಂಬಗಳ ವ್ಯಕ್ತಿಗಳಿಗೆ ಅನುಕೂಲ ಮಾಡಲಿದೆ.
2025ರ ಹೊಸ ಪಾಸ್ಪೋರ್ಟ್ ನಿಯಮಗಳಲ್ಲಿ ಪಾಸ್ಪೋರ್ಟ್ ಸೇವೆಗಳನ್ನು ಇನ್ನಷ್ಟು ತ್ವರಿತಗೊಳಿಸಲು ಸರಕಾರ Post Office Passport Seva Kendras (POPSKs) ಅನ್ನು ಹೆಚ್ಚಿಸುವ ಯೋಜನೆ ತಯಾರಿಸಿದೆ. ಇದರಲ್ಲಿ 442 POPSK ಗಳಿಂದ 600ಕ್ಕೆ ಹೆಚ್ಚಿಸಲಾಗುವುದು. ಈ ವಿಸ್ತರಣೆ ಮುಂಬರುವ ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಹೆಚ್ಚುವರಿ ಸೇವಾ ಕೇಂದ್ರಗಳು ಹೆಚ್ಚು ಜನರಿಗೆ ಸುಲಭ ಪಾಸ್ಪೋರ್ಟ್ ಸೇವೆಯನ್ನು ಒದಗಿಸಲಿವೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಭಾರತೀಯ ಅಂಚೆ ಇಲಾಖೆ (Department of Posts) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪರಸ್ಪರ ಒಪ್ಪಂದವನ್ನು (MoU) ಐದು ವರ್ಷಗಳ ಕಾಲ ವಿಸ್ತರಿಸಿದೆ.
ಈ ಹೊಸ ನಿಯಮಗಳಿಂದ ಜನರಿಗೆ ಆಗುವ ಪ್ರಯೋಜನವೇನು?
ಜನನ ಪ್ರಮಾಣಪತ್ರ ಕಡ್ಡಾಯವಾಗಿರುವುದರಿಂದ ದಾಖಲೆ ವಂಚನೆ ತಡೆಯಬಹುದು. ಮನೆ ವಿಳಾಸ ಗೌಪ್ಯತೆ ಕಾಪಾಡುವ ರೀತಿಯಲ್ಲಿ ಡಿಜಿಟಲ್ ಮಾದರಿಯಲ್ಲಿ ಇರಲಿದೆ. ಹೊಸ ಕಲರ್ ಕೋಡ್ ಪಾಸ್ಪೋರ್ಟ್ ಗುರುತಿಸುವಿಕೆಯನ್ನು ಸುಲಭಗೊಳಿಸುತ್ತದೆ. ಪೋಷಕರ ಹೆಸರು ಮುದ್ರಣದ ಅವಶ್ಯಕತೆ ಇಲ್ಲದ ಕಾರಣ ಅನಾಥರು, ಓರ್ವ ಪೋಷಕರ ಕುಟುಂಬದವರು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಇದಲ್ಲದೆ ಹೆಚ್ಚುವರಿ ಪಾಸ್ಪೋರ್ಟ್ ಸೇವಾ ಕೇಂದ್ರಗಳು ಜನರಿಗೆ ಹೆಚ್ಚಿನ ಅನುಕೂಲ ನೀಡಲಿವೆ. ಈ ಹೊಸ ನಿಯಮಗಳು ಪಾಸ್ಪೋರ್ಟ್ ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷಿತ, ಸುಗಮ ಹಾಗೂ ಏಕರೂಪ ಮಾಡಲಿವೆ.







