ಹೊಸ ಪಾಸ್ಪೋರ್ಟ್ ನಿಯಮ ಪ್ರಕಟ: ಶುಲ್ಕ ಏರಿಕೆ, ಮಕ್ಕಳ ಪಾಸ್ಪೋರ್ಟ್ ಮಾನ್ಯತೆ ಅವಧಿಯಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ | Photo Credit : magnific.com
ಹೊಸದಿಲ್ಲಿ: ಪಾಸ್ಪೋರ್ಟ್ ಅರ್ಜಿ ಶುಲ್ಕ ಹೆಚ್ಚಳ ಹಾಗೂ ಮಕ್ಕಳ ಪಾಸ್ಪೋರ್ಟ್ನ ಮಾನ್ಯತೆಯ ಅವಧಿಗೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್ ಪೋರ್ಟ್ (ತಿದ್ದುಪಡಿ) ನಿಯಮಗಳು- 2026 ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ.
ನೂತನ ನಿಯಮಾವಳಿಗಳಿಗೆ ಜಂಟಿ ಕಾರ್ಯದರ್ಶಿ ಹಾಗೂ ಮುಖ್ಯ ಪಾಸ್ಪೋರ್ಟ್ ಅಧಿಕಾರಿ ಬಿ.ಎಸ್. ಮುಬಾರಕ್ ಅವರು ಸಹಿಹಾಕಿದ್ದಾರೆ. ಅಧಿಸೂಚನೆಯು ಸೆಪ್ಟೆಂಬರ್ 15ರಂದು ಅಧಿಕೃತ ಗೆಝೆಟ್ನಲ್ಲಿ ಪ್ರಕಟಗೊಂಡ ತಕ್ಷಣದಿಂದಲೇ ನಿಯಮಾವಳಿಗಳು ಜಾರಿಗೆ ಬಂದಿವೆ.
ನಿಯಮ 12ರಡಿ ನೂತನವಾಗಿ ರಚನೆಯಾದ ಉಪ ನಿಯಮ (1ಎ)ರ ಅನ್ವಯ 15 ವರ್ಷಕ್ಕಿಂತ ಕೆಳವಯಸ್ಸಿನ ಮಗುವಿಗೆ 36 ಪುಟಗಳ ಸಾಮಾನ್ಯ ಪಾಸ್ಪೋರ್ಟ್, ವಿತರಿಸಿದ ದಿನಾಂಕದಿಂದ 5 ವರ್ಷಗಳವರೆಗೆ ಅಥವಾ ಮಗುವಿಗೆ 18 ವರ್ಷವಾಗುವವರೆಗೆ ( ಇವೆರಡಲ್ಲಿ ಯಾವುದು ಮೊದಲು ಆಗುವುದೋ )ಅಲ್ಲಿಯವರೆಗೆ ಮಾನ್ಯವಾಗುತ್ತದೆ.
ನಿಯಮ 8(1)ಕ್ಕೆ ಮಾಡಲಾದ ತಿದ್ದುಪಡಿಗಳ ಪ್ರಕಾರ, ಎಲ್ಲಾ ರೀತಿಯ ಅರ್ಜಿಗಳು 1980ರ ಪಾಸ್ಪೋರ್ಟ್ ನಿಯಮಗಳ 14ನೇ ಶೆಡ್ಯೂಲ್ನಲ್ಲಿ ಸೂಚಿಸಲಾದ ನವೀಕರಿಸಿದ ದರಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕಾಗುತ್ತದೆ.
ಈ ಬದಲಾವಣೆಗಳು 1980 ಮೂಲಭೂತ ಪಾಸ್ಪೋರ್ಟ್ ನಿಯಮಗಳನ್ನು ತಿದ್ದುಪಡಿಗೊಳಿಸಲಿದ್ದು, ಅವುಗಳಲ್ಲಿ ಹೆಚ್ಚಿನವುಗಳನ್ನು 2026ರ ಜೂನ್ನಲ್ಲಿ ನವೀಕರಿಸಲಾಗಿದೆ. ಮತ್ತು ದೇಶಾದ್ಯಂತದ ಯುವ ಅರ್ಜಿದಾರರಿಗೆ ಪಾಸ್ಪೋರ್ಟ್ ನೀಡಿಕೆಯಲ್ಲಿ ಕಾನೂನಾತ್ಮಕ ಸ್ಪಷ್ಟತೆಯನ್ನು ತರಲಿದೆಯೆಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ನೂತನ ದರಗಳು ಜುಲೈ 1ರಿಂದಲೇ ಜಾರಿಗೆ ಬಂದಿರುವುದಾಗಿ ಅದು ಹೇಳಿದೆ.
ನೂತನ ಶುಲ್ಕ ಹೆಚ್ಚಳವು ಹೊಸ ಪಾಸ್ಪೋರ್ಟ್ ವಿತರಣೆ, ನವೀಕರಣ, ತತ್ಕಾಲ್ ಪರಿಷ್ಕರಣೆ, ಕಳೆದು ಹೋದ ಅಥವಾ ಹಾನಿಗೀಡಾದ ಪಾಸ್ಪೋರ್ಟ್ಗಳ ಬದಲಿಸುವಿಕೆ ಹಾಗೂ ಪೊಲೀಸ್ ಅನುಮೋದನಾ ಪ್ರಮಾಣಪತ್ರ (ಪಿಸಿಸಿ) ಸೇರಿದಂತೆ ಪಾಸ್ಪೋರ್ಟ್ಗೆ ಸಂಬಂಧಿಸಿದ ಎಲ್ಲಾ ಸೇವೆಗಳ ಶುಲ್ಕಗಳನ್ನು ಪರಿಷ್ಕರಿಸಿದೆ.
ನೂತನ ಪರಿಷ್ಕರಣಾ ಶುಲ್ಕ ಸಂರಚನೆಯಡಿ, ವಯಸ್ಕರಿಗೆ ನೂತನ ಅಥವಾ ಪುನರ್ನವೀಕರಣ ಪಾಸ್ಪೋರ್ಟ್ಗಳ ಮೇಲಿನ ಶುಲ್ಕವನ್ನು ಗಣನೀಯವಾಗಿ ಹೆಚ್ಟಿಸಲಾಗಿದೆ. ಸಾಮಾನ್ಯ ಶ್ರೇಣಿಯ 36 ಪುಟಗಳ ಪಾಸ್ಪೋರ್ಟ್ ಪುಸ್ತಕಕ್ಕೆ ಈಗ 2500ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಹಿಂದೆ ಇದು 1500ರೂ. ಆಗಿತ್ತು. 60ಪುಟಗಳ ಪಾಸ್ಪೋರ್ಟ್ ಪುಸ್ತಕಕ್ಕೆ 3,500ರೂ. ನಿಗದಿಪಡಿಸಲಾಗಿದ್ದರೆ, ಈ ಮೊದಲು ಇದು 2 ಸಾವಿರ ರೂ. ಆಗಿತ್ತು.
ತತ್ಕಾಲ್ ಸೇವೆಯಲ್ಲೂ ಶುಲ್ಕಗಳನ್ನು ಹೆಚ್ಚಿಸಲಾಗಿದೆ. ತತ್ಕಾಲ್ನಡಿ 36 ಪುಟಗಳ ಪಾಸ್ಪೋರ್ಟ್ಗೆ ಅರ್ಜಿ ಶುಲ್ಕವನ್ನು 3,500ರೂ.ನಿಂದ 5 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. 60 ಪುಟಗಳ ತತ್ಕಾಲ್ ಪಾಸ್ಪೋರ್ಟ್ಗೆ 6 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಈ ಹಿಂದೆ 4 ಸಾವಿರ ರೂ. ಆಗಿತ್ತು. ತತ್ಕಾಲ್ನಡಿ 60 ಪುಟಗಳ ಪಾಸ್ಪೋರ್ಟ್ನ ಶುಲ್ಕವನ್ನು 5,500 ರೂ.ರಿಂದ 8500ಕ್ಕೆ ಏರಿಸಲಾಗಿದೆ.
ಅಪ್ರಾಪ್ತ ವಯಸ್ಕರಿಗೆ ಸಾಮಾನ್ಯ ಶ್ರೇಣಿಯ 36 ಪುಟಗಳ ಹೊಸ ಅಥವಾ ಮರುವಿತರಣೆ ಪಾಸ್ಪೋರ್ಟ್ಗೆ 1750 ರೂ. ಶುಲ್ಕ ವಿಧಿಸಲಾಗಿದೆ (ಹಿಂದೆ 1 ಸಾವಿರ ರೂ. ಆಗಿತ್ತು), ಇದೇ ಶ್ರೇಣಿಯಡಿ ತತ್ಕಾಲ್ಗೆ 3 ಸಾವಿರ ರೂ. ಆಗಲಿದೆ.
ಎಂಟು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೊಸ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಕೆ ಶುಲ್ಕದ ಮೇಲೆ ಶೇ.10ರಷ್ಟು ಕಡಿತ ಮುಂದುವರಿಯಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.






