ಪುಣೆ | ಐಟಿ ಉದ್ಯೋಗಿಯ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು: ಬಂಧಿತ ಆರೋಪಿ ಟೆಕ್ಕಿಯ ಸ್ನೇಹಿತ!
ಸೆಲ್ಫಿ ತೆಗೆದುಕೊಂಡು ಆಕೆಯೇ ಟೈಪ್ ಮಾಡಿದ್ದಳು ಬೆದರಿಕೆ ಸಂದೇಶ!

ಪುಣೆ : ಮಹಾರಾಷ್ಟ್ರದ ಪುಣೆಯಲ್ಲಿ ಐಟಿ ಉದ್ಯೋಗಿಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿ ವಾಸ್ತವವಾಗಿ ಆಕೆಯ ಸ್ನೇಹಿತ ಎಂದು ಪೊಲೀಸರು ಹೇಳಿದ್ದಾರೆ.
ʼಬುಧವಾರ ಸಂಜೆ ತನ್ನ ಫ್ಲಾಟ್‌ಗೆ ಡೆಲಿವರಿ ಏಜೆಂಟ್ ಆಗಿ ನಟಿಸಿದ ಅಪರಿಚಿತ ವ್ಯಕ್ತಿಯೊಬ್ಬ ಪ್ರವೇಶಿಸಿ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಘಟನೆ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆʼ ಎಂದು 22ರ ಹರೆಯದ ಐಟಿ ಉದ್ಯೋಗಿಯೋರ್ವರು ಆರೋಪಿಸಿದ್ದರು.
ಪಿಟಿಐ ವರದಿಯ ಪ್ರಕಾರ, ಆ ವ್ಯಕ್ತಿ ವಾಸ್ತವವಾಗಿ ಮಹಿಳೆಯ ಸ್ನೇಹಿತ, ಆತನೊಂದಿಗೆ ಆಕೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ನಂತರ ಫೋನ್‌ನಲ್ಲಿ ಬೆದರಿಕೆ ಸಂದೇಶವನ್ನು ಟೈಪ್ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ʼಅವರು ಒಂದೆರಡು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರು ಮತ್ತು ಒಂದೇ ಸಮುದಾಯಕ್ಕೆ ಸೇರಿದವರುʼ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ʼನಾನು ಒಬ್ಬಂಟಿಯಾಗಿದ್ದ ವೇಳೆ ಆ ವ್ಯಕ್ತಿ ನನ್ನ ಮನೆಗೆ ಪ್ರವೇಶಿಸಿದ್ದಾನೆ. ನಂತರ ನಾನು ಪ್ರಜ್ಞೆ ಕಳೆದುಕೊಂಡೆ. ನನಗೆ ಪ್ರಜ್ಞೆ ಬಂದಾಗ ಅವನು ಅಲ್ಲಿಂದ ಹೋಗಿದ್ದ. ಹೊರಡುವ ಮೊದಲು, ಆರೋಪಿ ತನ್ನ ಫೋನ್ ಬಳಸಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದನು. ಅದರಲ್ಲಿ ನನ್ನ ಬೆನ್ನು ಮತ್ತು ಅವನ ಮುಖದ ಒಂದು ಭಾಗ ಕಾಣಿಸುತ್ತಿತ್ತು, ಕೃತ್ಯದ ಬಗ್ಗೆ ಬಾಯ್ಬಿಟ್ಟರೆ ಪೋಟೊ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದʼ ಎಂದು ಮಹಿಳೆ ಆರೋಪಿಸಿದ್ದರು.
ʼಬುಧವಾರ ಸಂಜೆ 7.30ರ ಸುಮಾರಿಗೆ ನಗರದ ಕೊಂಧ್ವಾ ಪ್ರದೇಶದ ಫ್ಲಾಟ್‌ನಲ್ಲಿ ಘಟನೆ ನಡೆದಿದೆ. ಆ ಮಹಿಳೆಯೇ ಸೆಲ್ಫಿ ತೆಗೆದುಕೊಂಡಿದ್ದಾಳೆ, ಅದರಲ್ಲಿ ಅವನ ಮುಖ ಸ್ಪಷ್ಟವಾಗಿ ಕಂಡು ಬರುತ್ತಿತ್ತು. ಅದನ್ನು ಎಡಿಟ್ ಮಾಡಿ ಆಕೆಯೇ ಬೆದರಿಕೆ ಸಂದೇಶವನ್ನು ಟೈಪ್ ಮಾಡಿದ್ದಳು. ಮೊದಲೇ ಅನುಮಾನಿಸಿದಂತೆ ಅವಳನ್ನು ಪ್ರಜ್ಞಾಹೀನಳನ್ನಾಗಿ ಮಾಡಲು ಯಾವುದೇ ರಾಸಾಯನಿಕ ಸ್ಪ್ರೇ ಬಳಸಲಾಗಿಲ್ಲ. ಸಂತ್ರಸ್ತಳು ಅತ್ಯಾಚಾರದ ಆರೋಪಗಳನ್ನು ಏಕೆ ಮಾಡಿದ್ದಾಳೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆʼ ಎಂದು ಪೊಲೀಸರು ತಿಳಿಸಿದ್ದಾರೆ.