ಭಾರತದಲ್ಲಿ ಜೀವಿಸಬೇಕಿದ್ದರೆ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಬೇಕು: ಕೇಂದ್ರ ಸಚಿವ ಕೈಲಾಶ್ ಚೌಧರಿ

ಕೇಂದ್ರ ಸಚಿವ ಕೈಲಾಶ್ ಚೌಧರಿ (Photo:Facebook)
ಹೈದರಾಬಾದ್: ಭಾರತದಲ್ಲಿ ಜೀವಿಸಲು ಬಯಸುವವರು ‘ಭಾರತ್ ಮಾತಾ ಕಿ ಜೈ ಘೋಷಣೆ’ ಕೂಗಬೇಕು ಎಂದು ಕೇಂದ್ರ ಸಚಿವ ಕೈಲಾಶ್ ಚೌಧರಿ ಎಚ್ಚರಿಕೆ ನೀಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಿಜೆಪಿ ಆಯೋಜಿಸಿದ್ದ ರೈತ ಸಮಾವೇಶವನ್ನುದ್ದೇಶಿಸಿ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಕೈಲಾಶ್ ಚೌಧರಿ ಮಾತನಾಡುತ್ತಿದ್ದರು.
ಹೈದರಾಬಾದ್ ನಲ್ಲಿ ಸಾರ್ವಜನಿಕ ಪ್ರತಿನಿಧಿಗಳು ಬಳಸುತ್ತಿರುವ ಭಾಷೆಯನ್ನು ಉಲ್ಲೇಖಿಸಿದ ಅವರು,ಅಂಥವರಿಗೆ ಭವಿಷ್ಯದಲ್ಲಿ ಪಾಠವನ್ನು ಕಲಿಸಬೇಕಿದೆ ಹಾಗೂ ರಾಷ್ಟ್ರೀಯವಾದಿ ಚಿಂತನೆಯನ್ನು ಹೊಂದಿರುವ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿದೆ ಎಂದು ಕರೆ ನೀಡಿದ್ದಾರೆ.
‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗದವರು ನರಕಕ್ಕೆ ಹೋಗಲಿ ಎಂದಿರುವ ಅವರು, “ಭಾರತ್ ಮೆ ರೆಹ್ನಾ ಹೈ, ತೊ ‘ಭಾರತ್ ಮಾತಾ ಕಿ ಜೈ’ ಬೋಲ್ನಾ ಹೋಗಾ” (ಭಾರತದಲ್ಲಿ ಜೀವಿಸಬೇಕಿದ್ದರೆ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಬೇಕಿದೆ) ಎಂದು ಹೇಳಿದ್ದಾರೆ.
“ಭಾರತದಲ್ಲಿ ನೆಲೆಸಿ, ನೀವು ಪಾಕಿಸ್ತಾನಕ್ಕೆ ಝಿಂದಾಬಾದ್ ಹೇಳುತ್ತೀರಾ?” ಎಂದು ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಅವರು ಪ್ರಶ್ನಿಸಿದ್ದಾರೆ.
‘ವಂದೇ ಮಾರತಂ’ ಹಾಗೂ ‘ಭಾರತ್ ಮಾತಾ ಕಿ ಜೈ’ ಘೋಷಣೆ ಹೇಳುವವರಿಗೆ ಮಾತ್ರ ಭಾರತದಲ್ಲಿ ಜೀವಿಸಲು ಅವಕಾಶವಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ನವೆಂಬರ್ 3ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ನಾಯಕರು ಪದೇ ಪದೇ ಪ್ರಚೋದನಾತ್ಮಕ ಭಾಷಣ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೂ ಮುನ್ನ ತೆಲಂಗಾಣ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಕೂಡಾ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದರು.







