ಗಾಝಾ ಬೆಂಬಲಿಸಿ ಕಿಟ್ ನಲ್ಲಿ ಕ್ರಿಕೆಟಿಗ ಖ್ವಾಜಾ ಬರಹ ; ಆಟಗಾರರು ಐಸಿಸಿ ನಿಯಮಗಳಿಗೆ ಬದ್ದರಾಗಿರಬೇಕು ಎಂದ ಕ್ರಿಕೆಟ್ ಆಸ್ಟ್ರೇಲಿಯ
Photo : PTI
ಪರ್ತ್ :ಇಸ್ರೇಲ್ ದಾಳಿಯಿಂದ ತತ್ತರಿಸಿರುವ ಗಾಝಾದ ಜನರಿಗೆ ಬೆಂಬಲ ವ್ಯಕ್ತಪಡಿಸಿರುವ ಉಸ್ಮಾನ್ ಖ್ವಾಜಾ ಅವರ ಹಕ್ಕನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಗೌರವಿಸಿದೆ. ಆದರೆ ಅವರು ಕ್ರಿಕೆಟ್ ಆಟದ ಸಲಕರಣೆಗಳ ಮೇಲೆ ಬರೆದಿರುವ ಘೋಷಣೆಗಳನ್ನು ನಿಷೇಧಿಸುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಒತ್ತಿ ಹೇಳಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ವಿರುದ್ಧದ ಮುಂಬರುವ ಟೆಸ್ಟ್ಗಾಗಿ ಮಂಗಳವಾರದ ತರಬೇತಿ ಅವಧಿಯಲ್ಲಿ ಆಸೀಸ್ ಆರಂಭಿಕ ಆಟಗಾರ ಖ್ವಾಜಾ ಅವರು ಫೆಲೆಸ್ತೀನ್ ಧ್ವಜದ ಬಣ್ಣದಲ್ಲಿ "ಸ್ವಾತಂತ್ರ್ಯ ಮಾನವ ಹಕ್ಕು" ಮತ್ತು "ಎಲ್ಲಾ ಜೀವಗಳು ಸಮಾನ" ಎಂದು ತಮ್ಮ ಶೂಗಳ ಮೇಲೆ ಬರೆದುಕೊಂಡಿದ್ದರು.
ಗುರುವಾರ ಪರ್ತ್ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಪಂದ್ಯದ ವೇಳೆ ಪಾಕಿಸ್ತಾನ ಮೂಲದ ಆರಂಭಿಕ ಆಟಗಾರ ಈ ಬೂಟುಗಳನ್ನು ಧರಿಸಲು ಉದ್ದೇಶಿಸಿದ್ದರು ಎಂದು ಆಸ್ಟ್ರೇಲಿಯಾದ ಮಾಧ್ಯಮಗಳ ವರದಿ ಮಾಡಿವೆ. ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಆಟಗಾರರ ಹಕ್ಕಿಗಾಗಿ ತಮ್ಮ ಬೆಂಬಲವನ್ನು ಪ್ರತಿಪಾದಿಸುವ ಹೇಳಿಕೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ನೀಡಿತು. ಆದರೆ ವೈಯಕ್ತಿಕ ಸಂದೇಶಗಳ ಪ್ರದರ್ಶನದ ವಿರುದ್ಧ ICC ಯ ಅಸ್ತಿತ್ವದಲ್ಲಿರುವ ನಿಯಮಗಳನ್ನು ಆಸ್ಟ್ರೇಲಿಯಾ ಕ್ರಿಕೆಟ್ ಎತ್ತಿ ತೋರಿಸಿದೆ.
"ನಮ್ಮ ಆಟಗಾರರ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ನಾವು ಬೆಂಬಲಿಸುತ್ತೇವೆ. ಆದರೆ ಆಟಗಾರರು ವೈಯಕ್ತಿಕ ಸಂದೇಶಗಳ ಪ್ರದರ್ಶನವನ್ನು ನಿಷೇಧಿಸುವ ನಿಯಮಗಳನ್ನು ಐಸಿಸಿ ಹೊಂದಿದೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಖವಾಜಾ ಪಂದ್ಯದ ಸಮಯದಲ್ಲಿ ಈ ಬೂಟುಗಳನ್ನು ಧರಿಸುವುದಿಲ್ಲ ಎಂದು ಖಚಿತಪಡಿಸಿದರು. ಆದರೆ ತನ್ನ ತಂಡದ ಆಟಗಾರನ ಪ್ರತಿಭಟನೆಗೆ ಅವರು ಬೆಂಬಲ ಸೂಚಿಸಿದರು. "ಖವಾಜಾ ತುಂಬಾ ದೊಡ್ಡ ಗಲಾಟೆ ಮಾಡಲು ಬಯಸುವುದಿಲ್ಲ. ಅವರ ಶೂಗಳ ಮೇಲೆ 'ಎಲ್ಲಾ ಜೀವಗಳು ಸಮಾನವಾಗಿವೆ' ಎಂದು ಬರೆದಿದೆ. ಇದು ತುಂಬಾ ಸಮಸ್ಯೆ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಖವಾಜಾ ಅವರು ಈ ಹಿಂದೆ ಮಕ್ಕಳ ಚಾರಿಟಿ ಯುನಿಸೆಫ್ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು.
ICC ನೀತಿ ಸಂಹಿತೆ ಪ್ರಕಾರ ಆಟಗಾರರು ಪೂರ್ವಾನುಮತಿಯಿಲ್ಲದೆ ಬಟ್ಟೆ ಅಥವಾ ಸಲಕರಣೆಗಳ ಮೇಲೆ ಸಂದೇಶಗಳನ್ನು ಪ್ರದರ್ಶಿಸುವುದಕ್ಕೆ ನಿಷೇಧವಿದೆ. ಅಂತಹ ಸಂದೇಶಗಳನ್ನು ವಿಶೇಷವಾಗಿ ರಾಜಕೀಯ, ಧಾರ್ಮಿಕ ಅಥವಾ ಜನಾಂಗೀಯ ಚಟುವಟಿಕೆ ಅಥವಾ ಕಾರಣಗಳಿಗಾಗಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ICC ಐತಿಹಾಸಿಕವಾಗಿ ರಾಜಕೀಯ ಅಭಿವ್ಯಕ್ತಿಗಳನ್ನು ಅನುಮತಿಸದಿದ್ದರೂ, 2020 ಮತ್ತು 2021 ರಲ್ಲಿನ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಆಂದೋಲನವನ್ನು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬೆಂಬಲಿಸಲು ಆಟಗಾರರಿಗೆ ಅನುಮತಿ ನೀಡಿದೆ.
ಆಸ್ಟ್ರೇಲಿಯಾದ ಕ್ರೀಡಾ ಸಚಿವೆ ಅನಿಕಾ ವೆಲ್ಸ್ ಅವರು ಖವಾಜಾಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಕ್ರೀಡಾಪಟುಗಳು ಅವರಿಗೆ ಮುಖ್ಯವಾದ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಅವರು ಪ್ರತಿಪಾದಿಸಿದ್ದಾರೆ. ಖವಾಜಾ ಅವರ ವೈಯಕ್ತಿಕ ಅಭಿಪ್ರಾಯದ ಶಾಂತಿಯುತ ಮತ್ತು ಗೌರವಾನ್ವಿತ ಅಭಿವ್ಯಕ್ತಿಯನ್ನು ಅವರು ಒತ್ತಿಹೇಳಿದರು.