ಬೆದರಿಕೆ ಹಾಕಲು, ಹಿಂದೂಗಳನ್ನು ನಿಂದಿಸಲು, ದ್ವೇಷ ಹರಡಲು ಮುಸ್ಲಿಮರ ಹೆಸರುಗಳ ದುರ್ಬಳಕೆ!
ಕ್ರಿಮಿನಲ್ ಗಳಿಗೆ ಮುಸ್ಲಿಮರ ಹೆಸರು ದುರ್ಬಳಕೆ ಏಕೆ ಹೊಸ ಅಸ್ತ್ರ?

ಕ್ರೈಂ ಮಾಡಲು, ಬೆದರಿಕೆ ಹಾಕಲು, ಕೆಟ್ಟದ್ದನ್ನು ಹರಡಲು ಮುಸ್ಲಿಮ ಹೆಸರನ್ನು ಬಳಸಿ, ಆ ಸಮುದಾಯದ ವಿರುದ್ಧ ಇನ್ನಷ್ಟು ದ್ವೇಷ ಹರಡುವ ಸಂಚು ಹೊಸದೇನೂ ಅಲ್ಲ. ಮುಸ್ಲಿಮರ ಹೆಸರಲ್ಲಿ ನಕಲಿ ಖಾತೆಗಳು ಅಥವಾ ಈಮೇಲ್ ಐಡಿಗಳನ್ನು ರಚಿಸುವ ಆತಂಕಕಾರಿ ಪ್ರವೃತ್ತಿಯಲ್ಲಿ ಇದು ಇತ್ತೀಚಿನ ಪ್ರಕರಣ.
ದಿ ಕ್ವಿಂಟ್ ನಲ್ಲಿ ಅಲಿಝಾ ನೂರ್ ಬರೆದ ವರದಿಯೊಂದು ಇತ್ತೀಚಿನ ಬಾಂಬ್ ಬೆದರಿಕೆ ಘಟನೆಯ ಹಿನ್ನೆಲೆಯಲ್ಲಿ ಇಂಥ ಪ್ರಕರಣಗಳ ಬಗ್ಗೆ ಹೇಳಿದೆ. 2025ರ ಕುಂಭಮೇಳಕ್ಕೆ ತಯಾರಿ ನಡೆಯುತ್ತಿದ್ದಾಗ ಸಾಮಾಜಿಕ ಮಾಧ್ಯಮದಲ್ಲಿ ಬಾಂಬ್ ಸ್ಫೋಟ ಬೆದರಿಕೆಯ ಪೋಸ್ಟ್ ಒಂದು ಕಾಣಿಸಿಕೊಂಡಿದೆ.
ಕುಂಭಮೇಳದಲ್ಲಿ ಕನಿಷ್ಠ 1,000 ಭಕ್ತರನ್ನು ಕೊಲ್ಲುವ ಬೆದರಿಕೆ ಹಾಕಲಾಗಿತ್ತು. ಈ ಪೋಸ್ಟ್ ಅನ್ನು ನಾಸಿರ್ ಪಠಾಣ್ ಎಂಬ ಖಾತೆಯಿಂದ ಹಾಕಲಾಗಿತ್ತು. ಪೊಲೀಸ್ ತನಿಖೆಯ ನಂತರ, 11ನೇ ತರಗತಿಯ ವಿದ್ಯಾರ್ಥಿ, 17 ವರ್ಷದ ಆಯುಷ್ ಕುಮಾರ್ ಜೈಸ್ವಾಲ್ ಎಂಬವನು ಮುಸ್ಲಿಮ್ ವ್ಯಕ್ತಿಯ ಹೆರಸಲ್ಲಿ ರಚಿಸಿದ್ದ ನಕಲಿ ಖಾತೆ ಅದೆಂಬುದು ತಿಳಿದುಬಂದಿದೆ.
11ನೇ ತರಗತಿ ವಿದ್ಯಾರ್ಥಿ ಜೈಸ್ವಾಲ್ ಪ್ರಕರಣದಲ್ಲಿ, ಪೊಲೀಸರು ಮತ್ತು ಸೈಬರ್ ಸೆಲ್‌ನ ಜಂಟಿ ತಂಡ ಆತನ ಐಪಿ ಅಡ್ರೆಸ್ ಪತ್ತೆಹಚ್ಚಿ, ಆತ ಬಿಹಾರದ ಪೂರ್ಣಿಯಾ ಜಿಲ್ಲೆಗೆ ಸೇರಿದವನು ಎಂಬುದನ್ನು ಬಯಲು ಮಾಡಿದೆ.ಆತನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ ಎಂದು ಕ್ವಿಂಟ್ ವರದಿ ಹೇಳಿದೆ.
ಪ್ರಯಾಗರಾಜ್‌ನ ಮೇಳ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಸೆಕ್ಷನ್ 351 (2) (ಕ್ರಿಮಿನಲ್ ಬೆದರಿಕೆ), 352 (ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮುಸ್ಲಿಮರ ಹೆಸರನ್ನು ಹೀಗೆ ದುರ್ಬಳಕೆ ಮಾಡಲಾಗುತ್ತಿರುವುದರ ಬಗ್ಗೆ ದಿ ಕ್ವಿಂಟ್ ಗೆ ಪ್ರತಿಕ್ರಿಯೆ ಕೊಟ್ಟಿರುವ ದೆಹಲಿ ವಿವಿ ಪ್ರಾಧ್ಯಾಪಕ ಅಪೂರ್ವಾನಂದ್ ಅವರು, ಇದು ಹಿಂದುತ್ವ ಸಂಘಟನೆಗಳ ಹಳೆಯ ತಂತ್ರದ ಭಾಗವಾಗಿದೆ ಎಂದಿದ್ದಾರೆ.
ಈ ಹಿಂದೆಯೂ ಸಹ, ದೇವಾಲಯಗಳ ಮುಂದೆ ಮೃತದೇಹ ಅಥವಾ ಮಾಂಸವನ್ನು ಎಸೆಯುವಂಥ ಪ್ರಕರಣಗಳೂ ಸೇರಿದಂತೆ ಹಿಂದುತ್ವವಾದಿಗಳು ಮುಸ್ಲಿಮರಂತೆ ನಟಿಸಿ ಅವರ ವಿರುದ್ಧ ದ್ವೇಷ ಹರಡಲು ಹೀಗೆ ಮಾಡಿರುವ ಹಲವು ಪ್ರಕರಣಗಳಿವೆ ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ, ಕಾಂಗ್ರೆಸ್ ನಾಯಕರಾದ ಇಮ್ರಾನ್ ಪ್ರತಾಪ್‌ಗಢಿ ಮತ್ತು ಸುಪ್ರಿಯಾ ಶ್ರೀನೇತ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ.
ಇದಕ್ಕಿಂತ ಮುಂಚಿನ ಇಂಥದೇ ಇನ್ನೂ ಕೆಲವು ಪ್ರಕರಣಗಳನ್ನು ಗಮನಿಸುವುದಾದರೆ, 2023ರ ಡಿಸೆಂಬರ್ 27ರಂದು, ಲಕ್ನೋ ನಿವಾಸಿ ದೇವೇಂದ್ರ ತಿವಾರಿ ಎಂಬಾತ ಸಾಮಾಜಿಕ ಮಾಧ್ಯಮದಲ್ಲಿ ಜುಬೇರ್ ಖಾನ್ ಎಂಬ ವ್ಯಕ್ತಿ ಅವನನ್ನು, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಭ್ ಯಶ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಈಮೇಲ್ ಕಳುಹಿಸಿರುವುದಾಗಿ ಹೇಳಿದ್ದ. ಅತ್ಯಂತ ಉದ್ರೇಕಕಾರಿ, ದ್ವೇಷಪೂರಿತ ಭಾಷೆಯಿಂದ ಕೂಡಿದ್ದ ಈಮೇಲ್‌ನಲ್ಲಿ ಅವರೆಲ್ಲ ಮುಸ್ಲಿಮರ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ ಎಂದು ದೂಷಿಸಲಾಗಿತ್ತು. ಅವರನ್ನು ಕೊಲ್ಲುವುದಕ್ಕಾಗಿ ನಮ್ಮ ಜನ ಯುಪಿ ತಲುಪಿದ್ದಾರೆ ಎಂಬ ಬೆದರಿಕೆ ಆ ಮೇಲ್ ನಲ್ಲಿತ್ತು.
ಅವರನ್ನು ಹಿಂಸಿಸಿ ಕೊಲ್ಲಲಾಗುವುದು ಎಂದು ನಾನು ಅಲ್ಲಾಹನ ಮೇಲೆ ಪ್ರಮಾಣ ಮಾಡುತ್ತೇನೆ. ಇದಕ್ಕೆ ಐಎಸ್‌ಐ ಸಂಪೂರ್ಣ ಹೊಣೆ ಹೊರುತ್ತದೆ ಎಂದು ಈಮೇಲ್ನಲ್ಲಿ ಹೇಳಲಾಗಿತ್ತು.2023ರ ನವೆಂಬರ್ ನಲ್ಲಿಯೂ ಆಲಂ ಅನ್ಸಾರಿ ಖಾನ್ ಎಂಬ ವ್ಯಕ್ತಿಯಿಂದ ಇದೇ ರೀತಿಯ ಬೆದರಿಕೆ ಈಮೇಲ್ ಬಂದಿತ್ತು ಎಂದೂ ಆ ತಿವಾರಿ ಎಂಬಾತ ಹೇಳಿದ್ದ. ಕೆಲ ದಿನಗಳ ನಂತರ ಎಸ್‌ಟಿಎಫ್ ಈಮೇಲ್ ಗಳನ್ನು ಕಳುಹಿಸಿದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿತು.ಆದರೆ ಅವರಲ್ಲಿ ಯಾರೂ ಮುಸ್ಲಿಮರಿರಲಿಲ್ಲ. ಆರೋಪಿಗಳು ಗೊಂಡಾದ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಎಂಬವರಾಗಿದ್ದರು.
ಇನ್ನೂ ಆಘಾತಕಾರಿ ಸಂಗತಿಯೆಂದರೆ, ಯಾರು ಅಂಥ ಬೆದರಿಕೆ ಈಮೇಲ್ ಗಳ ಬಗ್ಗೆ ದೊಡ್ಡದಾಗಿ ದೂರಿದ್ದನೋ ಅದೇ ತಿವಾರಿಯೇ ಸ್ವತಃ ಮುಸ್ಲಿಮರ ಹೆಸರಲ್ಲಿ ಈಮೇಲ್ ಕ್ರಿಯೇಟ್ ಮಾಡಿ ಕಳಿಸಲು ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಅವರಿಗೆ ಹೇಳಿದವನಾಗಿದ್ದ ಎಂಬುದೂ ಬಯಲಾಗಿತ್ತು.
ಕೋಮು ಉದ್ವಿಗ್ನತೆ ಆರದಂತೆ ಉಳಿಸುವುದು ಮತ್ತು ಸಮಾಜದಲ್ಲಿ ಮುಸ್ಲಿಮರನ್ನು ಮತ್ತಷ್ಟು ಪ್ರತ್ಯೇಕಿಸುವುದು ಇದರ ಹಿಂದಿನ ಉದ್ದೇಶ ಎನ್ನುತ್ತಾರೆ ವಕೀಲ ಅನಸ್ ತನ್ವೀರ್.ಆ ತಿವಾರಿ ಎಂಬಾತನಿಗೆ ಇದೇ ಒಂದು ಕೆಲಸವಾಗಿತ್ತು. 2022ರ ಮಾರ್ಚ್, ಫೆಬ್ರವರಿಯಲ್ಲೂ 2021ರ ಡಿಸೆಂಬರ್ ನಲ್ಲೂ ಆತ ಇಂಥದೇ ಬೆದರಿಕೆ ಬಂದಿತ್ತೆಂದು ಆರೋಪಿಸಿದ್ದ. ಆ ಪ್ರಕರಣದಲ್ಲಿ, ಸಿಂಗ್ ಮತ್ತು ಮಿಶ್ರಾ ಅವರಿಂದ ಪೊಲೀಸರು 2 ಮೊಬೈಲ್ ಫೋನ್‌ಗಳು, ವೈಫೈ ರೂಟರ್ ಮತ್ತು ಡಿಜಿಟಲ್ ವಿಡಿಯೋ ರೆಕಾರ್ಡರ್ ಅನ್ನು ವಶಪಡಿಸಿಕೊಂಡಿದ್ದರು.
ಈ-ಮೇಲ್ ಐಡಿ ರಚಿಸಿದ ತಹರ್ ಸಿಂಗ್ ಮತ್ತು ಬೆದರಿಕೆ ಮೇಲ್ ಕಳುಹಿಸಿದ ಓಂ ಪ್ರಕಾಶ್ ಮಿಶ್ರಾ ಅವರನ್ನು ಬಂಧಿಸಲಾಗಿದೆ ಎಂದು ಎಸ್‌ಟಿಎಫ್ ಹೇಳಿದೆ.ಆದರೆ ಇದರ ಹಿಂದಿದ್ದ ತಿವಾರಿ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಯಲು ದಿ ಕ್ವಿಂಟ್ ಪ್ರಯತ್ನಿಸಿದರೂ, ಎಸ್ಟಿಎಫ್ನಿಂದ ಮಾಹಿತಿ ಸಿಕ್ಕಿಲ್ಲ ಎಂಬುದು ವರದಿಯಲ್ಲಿದೆ.
ತಿವಾರಿ ರಾಜಕೀಯ ಪ್ರಭಾವ ಗಳಿಸಲು ಹೀಗೆ ಮಾಡಿದ್ದಾಗಿ ಆರೋಪಿಸಲಾಗಿದೆ. ಆತ ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೋ ಸೇವಾ ಪರಿಷತ್ ಹೆಸರಿನಲ್ಲಿ ಎನ್‌ಜಿಒ ನಡೆಸುತ್ತಿದ್ದು, ಲಕ್ನೋದ ಹಲವಾರು ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ.
ಆತ ನಡೆಸುತ್ತಿರುವ, ಆಲಂಬಾಗ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಪ್ಯಾರಾ ಮೆಡಿಕಲ್ ಸೈನ್ಸಸ್ ಎಂಬ ಕಾಲೇಜಿನಲ್ಲಿಯೇ ಮಿಶ್ರಾ ಮತ್ತು ಸಿಂಗ್ ಇಬ್ಬರೂ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಫ್ಯಾಕ್ಟ್ ಚೆಕಿಂಗ್ ವೆಬ್‌ಸೈಟ್ BOOM ನ ಉಪ ಸಂಪಾದಕಿ ಕರೆನ್ ರೆಬೆಲೊ ಅವರು, ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸುವ ಇಂಥ ಪ್ರಕರಣಗಳು ಉದ್ದೇಶಪೂರ್ವಕವಾಗಿರುತ್ತವೆ ಎನ್ನುತ್ತಾರೆ. ದ್ವೇಷ ಹರಡಲು ಮುಸ್ಲಿಮ ಉಡುಪು ಬಳಕೆ ಮಾಡುವ ಮತ್ತೂ ಒಂದು ಬಗೆಯ ಪ್ರಕರಣಗಳು ಬಯಲಿಗೆ ಬಂದಿವೆ.
ಆಗ್ರಾದ ಧೀರೇಂದ್ರ ರಾಘವ್ ಎಂಬಾತನನ್ನು 2024ರ ಜೂನ್ ನಲ್ಲಿ ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು. ಆತ ಮುಸ್ಲಿಮ್ ಉಡುಪು ಧರಿಸಿ, ಮುಸ್ಲಿ ವ್ಯಕ್ತಿಯೆಂಬಂತೆ ನಟಿಸಿ ಹಿಂದೂ ಸಮುದಾಯವನ್ನು ನಿಂದಿಸಿದ್ದ. ಕೋಮು ಉದ್ವಿಗ್ನತೆ ಪ್ರಚೋದಿಸಿದ ಆರೋಪದ ಮೇಲೆ ಆಗ್ರಾ ಕೋರ್ಟ್ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಬಿಡುಗಡೆಯಾದ ಮೇಲೂ ಆತ ಮುಸ್ಲಿಮ ಉಡುಪು ಧರಿಸುವುದನ್ನು ನಿಲ್ಲಿಸಿಲ್ಲ. ಆದರೆ ಮುಸ್ಲಿಮರ ಹೆಸರಿನಲ್ಲಿ ದ್ವೇಷ ಹರಡುವ ಕೆಲಸ ಮಾಡದೆ, ಹಿಂದುತ್ವದ ಬಗ್ಗೆ ಬರೆದುಕೊಂಡು ಕೂತಿರುವುದು ತಿಳಿದುಬಂದಿದೆ.
ಮುಸ್ಲಿಮರಂತೆ ನಟಿಸಿ, ಬಾಂಬ್ ಬೆದರಿಕೆ ಹಾಕುವ, ದ್ವೇಷ ಭಾಷಣ ಮಾಡುವ ಇತರ ಪ್ರಕರಣಗಳು ನಡೆಯುತ್ತಲೇ ಇವೆ. ಈ ಹಿಂದೆ ಮುಕೇಶ್ ಅಂಬಾನಿಗೆ ಮುಸ್ಲಿಮ್ ಹೆಸರಲ್ಲಿ ಬೆದರಿಕೆ ಈಮೇಲ್ ಬಂದದ್ದು ಕೂಡ ದೊಡ್ಡ ಸುದ್ದಿಯಾಗಿತ್ತು. ಕಡೆಗೆ ಹಾಗೆ ಮುಸ್ಲಿಮ್ ಹೆಸರಲ್ಲಿ ಅಂಬಾನಿಗೆ ಬೆದರಿಕೆ ಈಮೇಲ್ ಕಳಿಸಿದ್ದು ರಾಜ್‌ವೀರ್ ಕಾಂತ್ ಎಂಬ ಬಿಕಾಂ ವಿದ್ಯಾರ್ಥಿ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿತ್ತು.
ಗುಜರಾತ್‌ನ ಕಲೋಲ್‌ನಲ್ಲಿದ್ದ ಆತನನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದರು. ಇಂಥ ಪ್ರಕರಣಗಳು ನಡೆಯುತ್ತಲೇ ಇವೆ.
2022ರ ಮಾರ್ಚ್ ನಲ್ಲಿ ಸಿದ್ಧಾರೂಢ ಶ್ರೀಕಾಂತ್ ನಿರಾಲೆ ಎಂಬ ವ್ಯಕ್ತಿ ಮುಷ್ತಾಕ್ ಅಲಿ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಪ್ರೊಫೈಲ್ ರಚಿಸಿ ಬಿಜೆಪಿ ಎಂಎಲ್‌ಸಿ ಡಿಎಸ್ ಅರುಣ್ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ್ದ ಪ್ರಕರಣವೂ ಈ ಸಾಲಿನಲ್ಲಿ ಬರುವ ಇನ್ನೊಂದು ಕೇಸ್ ಆಗಿದೆ.
ಇಂಥ ಪ್ರಕರಣಗಳಿಗೆ ತಡೆಯೆಂಬುದೇ ಇಲ್ಲವೆ ಅಥವಾ ಇಂಥವನ್ನು ವ್ಯವಸ್ಥಿತವಾಗಿ ನಡೆಯುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆಯೆ? ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ.