ಜಿಮ್–ಫಿಟ್ನೆಸ್ ಕೇಂದ್ರಗಳಲ್ಲಿ ಮಹಿಳೆಯರ ಶೋಷಣೆ, ಬಲವಂತದ ಮತಾಂತರ ಆರೋಪ: ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್

National Human Rights Commission | Photo Credit: Wikimedia Commons
ಹೊಸದಿಲ್ಲಿ: ಜಿಮ್ಗಳು ಮತ್ತು ಫಿಟ್ನೆಸ್ ಕೇಂದ್ರಗಳಲ್ಲಿ ಮಹಿಳೆಯರ ಶೋಷಣೆ ಹಾಗೂ ಬಲವಂತದ ಧಾರ್ಮಿಕ ಮತಾಂತರ ನಡೆಯುತ್ತಿರುವ ಆರೋಪಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಬುಧವಾರ (ಫೆಬ್ರವರಿ 4, 2026) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (MYAS) ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ (SAI)ಕ್ಕೆ ನೋಟಿಸ್ ಜಾರಿಗೊಳಿಸಿದೆ.
ದೇಶದ ವಿವಿಧ ಭಾಗಗಳಲ್ಲಿ ಜಿಮ್ಗಳು ಮತ್ತು ಫಿಟ್ನೆಸ್ ಕ್ಲಬ್ಗಳಲ್ಲಿ ತರಬೇತುದಾರರು ಮಹಿಳೆಯರನ್ನು ಗುರಿಯಾಗಿಸಿಕೊಂಡು ಲೈಂಗಿಕ ಶೋಷಣೆ ನಡೆಸಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆಯೋಗದ ಸದಸ್ಯ ಪ್ರಿಯಾಂಕ್ ಕನೂಂಗೊ ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ.
ಆರೋಗ್ಯದ ದೃಷ್ಟಿಯಿಂದ ಕಳಪೆ ಗುಣಮಟ್ಟದ ಪೂರಕ ಆಹಾರಗಳ ಬಳಕೆ ಮತ್ತು ನಿಯಂತ್ರಣವಿಲ್ಲದ ದೈಹಿಕ ಚಟುವಟಿಕೆಗಳು ಮಾನವ ಜೀವಕ್ಕೆ ಅಪಾಯಕಾರಿಯಾಗುವ ಸಾಧ್ಯತೆಯೂ ಇದೆ ಎಂದು ಆಯೋಗ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಜಿಮ್ ಗಳು ಮತ್ತು ಫಿಟ್ನೆಸ್ ಕೇಂದ್ರಗಳ ಸ್ಥಾಪನೆ ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದ ನಿಯಮಗಳು ಮತ್ತು ಮಾರ್ಗಸೂಚಿಗಳ ವಿವರಗಳನ್ನು ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳು, ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವಾಲಯ ಹಾಗೂ ಕ್ರೀಡಾ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಲಾಗಿದೆ.
“ಈ ವಲಯದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸುವ ದಿಕ್ಕಿನಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು” ಎಂದು ಪ್ರಿಯಾಂಕ್ ಕನೂಂಗೊ ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿಯೊಬ್ಬರು ಸಲ್ಲಿಸಿದ ದೂರಿನ ಮೇರೆಗೆ ಈ ನೋಟಿಸ್ ಹೊರಡಿಸಲಾಗಿದೆ. ಜಿಮ್ ಮತ್ತು ಫಿಟ್ನೆಸ್ ಸೆಂಟರ್ಗಳ ಹೆಸರಿನಲ್ಲಿ ಯುವತಿಯರನ್ನು ಶೋಷಣೆ ಮಾಡಲಾಗುತ್ತಿದ್ದು, ಬಲವಂತದ ಧಾರ್ಮಿಕ ಮತಾಂತರಕ್ಕಾಗಿ ಗುರಿಯಾಗಿಸಿಕೊಂಡು ಸಂಘಟಿತ ದಂಧೆ ನಡೆಯುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ದೂರುದಾರರು, ಈ ಚಟುವಟಿಕೆಗಳಲ್ಲಿ ಪೊಲೀಸರ ಸಹಭಾಗಿತ್ವವೂ ಇದೆ ಎಂದು ಆರೋಪಿಸಿದ್ದಾರೆ.
ಪೊಲೀಸರ ಪಾಲ್ಗೊಳ್ಳುವಿಕೆಯನ್ನು “ಅಧಿಕಾರದ ದುರುಪಯೋಗ, ಕಾನೂನು ಜಾರಿ ವೈಫಲ್ಯ ಮತ್ತು ಮಾನವ ಹಕ್ಕುಗಳು, ಮಹಿಳಾ ಸುರಕ್ಷತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ” ಎಂದಿರುವ ಅವರು ಆಯೋಗದ ಮಧ್ಯಸ್ಥಿಕೆಯನ್ನು ಕೋರಿದ್ದಾರೆ.
1993ರ ಮಾನವ ಹಕ್ಕುಗಳ ರಕ್ಷಣಾ ಕಾಯ್ದೆಯ ಸೆಕ್ಷನ್ 12ರಡಿ ಈ ದೂರನ್ನು ಪರಿಗಣಿಸಿರುವ ಆಯೋಗವು, ರಾಜ್ಯಗಳಲ್ಲಿ ಜಿಮ್ಗಳು ಮತ್ತು ಫಿಟ್ನೆಸ್ ಕೇಂದ್ರಗಳ ಸ್ಥಾಪನೆ, ನೋಂದಣಿ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಮಾರ್ಗಸೂಚಿಗಳು, ನೀತಿಗಳು ಹಾಗೂ ಮಾನದಂಡಗಳನ್ನು ರೂಪಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ.
ಇದೇ ವೇಳೆ ಜಿಮ್ಗಳು ಮತ್ತು ಫಿಟ್ನೆಸ್ ಕೇಂದ್ರಗಳಿಗೆ ಸಂಬಂಧಿಸಿದ ಯಾವುದೇ ಮಾರ್ಗಸೂಚಿಗಳು, ನೀತಿಗಳು ಅಥವಾ ನೋಂದಣಿ ಮಾನದಂಡಗಳ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗೂ ಸೂಚಿಸಲಾಗಿದೆ.
ಆಯೋಗದ ಪರಿಶೀಲನೆಗಾಗಿ ಎರಡು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ NHRC ಸೂಚಿಸಿದೆ.







