ಕೇರಳ: ನಿಲಂಬೂರು ಉಪಚುನಾವಣೆಯಲ್ಲಿ ಎಲ್ಡಿಎಫ್ ಗೆ ಬೆಂಬಲ ಘೋಷಿಸಿದ ಹಿಂದೂ ಮಹಾಸಭಾ!

ಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪ್ ನಾಥ್ / ಎಂ ಸ್ವರಾಜ್ Photo credit: mediaoneonline.com
ತಿರುವನಂತಪುರಂ: ಕೇರಳದ ನೀಲಂಬೂರ್ ಉಪಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಅಭ್ಯರ್ಥಿ ಎಂ ಸ್ವರಾಜ್ಗೆ ಅಖಿಲ ಭಾರತ ಹಿಂದೂ ಮಹಾಸಭಾ ಮಂಗಳವಾರ ಬೆಂಬಲ ಘೋಷಿಸಿದೆ. ನೀಲಂಬೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಕೇರಳ ಅಧ್ಯಕ್ಷ ಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪ್ ನಾಥ್ ಈ ಘೋಷಣೆ ಮಾಡಿದ್ದಾರೆ.
ಎಲ್ಡಿಎಫ್ನ ಗೆಲುವು "ಪ್ರಸ್ತುತ ಕಾಲದಲ್ಲಿ ನಿರ್ಣಾಯಕ" ಎಂದು ಸ್ವಾಮಿ ದತ್ತಾತ್ರೇಯ ಹೇಳಿದ್ದು, ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರವು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಈಗಾಗಲೇ, ಹಿಂದೂ ಮಹಾಸಭಾವು ಸಿಪಿಎಂ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಹಿರಿಯ ಸಿಪಿಎಂ ನಾಯಕ ಮತ್ತು ಪೊಲಿಟ್ಬ್ಯೂರೋ ಸದಸ್ಯ ಎ ವಿಜಯರಾಘವನ್ ಅವರೊಂದಿಗೆ ಇತ್ತೀಚೆಗೆ ಸಭೆ ನಡೆಸಿದ್ದೇವೆ ಎಂದು ಸ್ವಾಮಿ ದತ್ತಾತ್ರೇಯ ʼಮೀಡಿಯಾ ಒನ್ʼಗೆ ತಿಳಿಸಿದರು.
ಕಳೆದ ಲೋಕಸಭಾ ಚುನಾವಣೆಯಿಂದಲೂ ಹಿಂದೂ ಮಹಾಸಭಾ ಎಲ್ಡಿಎಫ್ ಅನ್ನು ಬೆಂಬಲಿಸುತ್ತಿದೆ. ನಾವು ಈ ಹಿಂದೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರೊಂದಿಗೆ ಮಾತುಕತೆ ನಡೆಸಿದ್ದೆವು. "ಎಲ್ಡಿಎಫ್ ಕೋಮುವಾದದ ವಿರುದ್ಧ ದೃಢವಾಗಿ ನಿಂತಿರುವುದರಿಂದ ನಾವು ಅದಕ್ಕೆ ನಮ್ಮ ಬೆಂಬಲವನ್ನು ನೀಡುತ್ತಿದ್ದೇವೆ" ಎಂದು ಸ್ವಾಮಿ ದತ್ತಾತ್ರೇಯ ಹೇಳಿದರು.
ಪಕ್ಷೇತರ ಶಾಸಕ ಪಿ.ವಿ. ಅನ್ವರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಿಲಂಬೂರಿನಲ್ಲಿ ಉಪಚುನಾವಣೆ ಅನಿವಾರ್ಯವಾಯಿತು. ಜೂನ್ 19 ರಂದು ಚುನಾವಣೆ ನಡೆಯಲಿದ್ದು, ಜೂನ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.







