ವಯನಾಡ್ ನ ಬಾವಲಿಗಳಲ್ಲಿ ನಿಫಾ ವೈರಸ್
ಐಸಿಎಂಆರ್ ಅಧ್ಯಯನದಲ್ಲಿ ದೃಢ: ಕೇರಳ ಆರೋಗ್ಯ ಸಚಿವೆ

Photo facebook/@veenageorgeofficial
ತಿರುವನಂತಪುರ : ವಯನಾಡ್ ನ ಬಾವಲಿಯ ಸ್ಯಾಂಪಲ್ಗಳಲ್ಲಿ ನಿಫಾ ವೈರಸ್ ಇರುವ ಬಗ್ಗೆ ಐಸಿಎಂಆರ್ ದೃಢಪಡಿಸಿದ ಬಳಿಕ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಕರೆ ನೀಡಿದೆ.
ಬತ್ತೇರಿ ಹಾಗೂ ಮಾನಂತವಾಡಿಯಿಂದ ಈ ಸ್ಯಾಂಪಲ್ ಗಳನ್ನು ತೆಗೆದುಕೊಳ್ಳಲಾಗಿದೆ. ‘‘ಕಳವಳ ಪಡುವ ಯಾವುದೇ ಅಗತ್ಯತೆ ಇಲ್ಲ. ಆದರೆ, ಜಾಗೃತಿ ಹೆಚ್ಚಿಸಲು ಮಾಹಿತಿ ಹಂಚಿಕೊಳ್ಳಬೇಕು’’ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.
‘‘ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ವಯನಾಡ್ ನ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ನಾವು ನಿರ್ಧರಿಸಿದ್ದೇವೆ. ನಿರಂತರ ನಿಗಾ ವಹಿಸಿದ ಕಾರಣ ನಮಗೆ ನಿಫಾ ಇರುವುದನ್ನು ಗುರುತಿಸಲು ಸಾಧ್ಯವಾಯಿತು’’ ಎಂದು ವೀಣಾ ಅವರು ಹೇಳಿದ್ದಾರೆ.
ಇತರ ಜಿಲ್ಲೆಗಳಲ್ಲಿ ಕೂಡ ನಿಫಾ ಇರುವುದನ್ನು ದೃಢಪಡಿಸುವ ಇದೇ ರೀತಿಯ ಅಧ್ಯಯನಗಳು ಮುಂದುವರಿದಿವೆ. ರಾಜ್ಯದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಸ್ಯಾಂಪಲ್ನ ಭಾಗವಾಗಿ ಐಸಿಎಂಆರ್ ಈ ಸಂಶೋಧನೆ ನಡೆಸುತ್ತಿದೆ ಎಂದು ಕೂಡ ಅವರು ಹೇಳಿದ್ದಾರೆ.
ಹಕ್ಕಿಗಳು ತಿಂದ ಹಣ್ಣನ್ನು ಬಳಸದಂತೆ ಹಾಗೂ ರೋಗ ಲಕ್ಷಣಗಳನ್ನು ನಿರ್ಲಕ್ಷಿಸದಂತೆ ಆರೋಗ್ಯ ಸಚಿವರು ಜನರಲ್ಲಿ ವಿನಂತಿಸಿದ್ದಾರೆ.
ರಾಜ್ಯದ ಕೋಝಿಕ್ಕೋಡ್ ನಲ್ಲಿ ನಿಫಾ ಸೆಪ್ಟಂಬರ್ನಲ್ಲಿ ನಾಲ್ಕನೇ ಬಾರಿ ವರದಿಯಾಯಿತು. ಎರಡು ಸಾವು ಸೇರಿದಂತೆ 6 ಪಾಸಿಟಿವ್ ಪ್ರಕರಣಗಳು ಅಲ್ಲಿ ಪತ್ತೆಯಾಗಿತ್ತು. ಕೋಝಿಕ್ಕೋಡ್ನ 42 ದಿನಗಳ ನಿಫಾ ಇನ್ಕ್ಯುಬೇಷನ್ ಅವಧಿ ಗುರುವಾರ ಅಂತ್ಯಗೊಳ್ಳಲಿದೆ. ಈಗ ಅಲ್ಲಿ ಹೊಸ ಪ್ರಕರಣಗಳು ಕಂಡುಬಂದಿಲ್ಲ.







