ನಿಥಾರಿ ಹತ್ಯೆ ಪ್ರಕರಣ: ಖುಲಾಸೆಯಾಗಿದ್ದ ಸುರೇಂದ್ರ ಕೋಲಿ ಆತ್ಮಹತ್ಯೆ

ಸುರೇಂದ್ರ ಕೋಲಿ (File Photo)
ಹರಿದ್ವಾರ: 2006ರ ನಿಥಾರಿ ಸರಣಿ ಕೊಲೆಗಳ ಆರೋಪಿ ಸುರೇಂದ್ರ ಕೋಲಿ ಶುಕ್ರವಾರ ಹರಿದ್ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು CNN-News18 ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುರೇಂದ್ರ ಕೋಲಿ ಉತ್ತರ ಹರಿದ್ವಾರದ ಭುಪತ್ವಾಲ್ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸುರೇಂದ್ರ ಕೋಲಿಯ ವಿರುದ್ಧ ದಾಖಲಾಗಿದ್ದ ಕೊನೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆತನನ್ನು ಖುಲಾಸೆಗೊಳಿಸಿ, ಜೈಲಿನಿಂದ ಬಿಡುಗಡೆಗೊಳಿಸಿತ್ತು.
2006ರಲ್ಲಿ ನೋಯ್ಡಾ ಸೆಕ್ಟರ್–31ರ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಅವರ ಬಂಗಲೆಯ ಹಿತ್ತಲಿನಲ್ಲಿ ಹಾಗೂ ಸಮೀಪದ ಚರಂಡಿಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಅಸ್ಥಿಪಂಜರ ಅವಶೇಷಗಳು ಪತ್ತೆಯಾದ ಬಳಿಕ ನಿಥಾರಿ ಪ್ರಕರಣ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಕರಣದ ಹಿನ್ನೆಲೆ
ಡಿಸೆಂಬರ್ 2006ರಲ್ಲಿ ಪಂಧೇರ್ ಅವರ ಮನೆಯ ಹಿಂದಿನ ಚರಂಡಿಯಲ್ಲಿ ಮಕ್ಕಳ ಮೂಳೆಗಳು, ತಲೆಬುರುಡೆಗಳು, ಬಟ್ಟೆಗಳು ಮತ್ತು ಚಪ್ಪಲಿಗಳು ಪತ್ತೆಯಾದ ಬಳಿಕ ನಿಥಾರಿ ಹತ್ಯಾಕಾಂಡ ಬೆಳಕಿಗೆ ಬಂದಿತ್ತು.
ಕನಿಷ್ಠ 19 ಮಕ್ಕಳು ಸಾವನ್ನಪ್ಪಿರುವುದು ದೃಢಪಟ್ಟಿದ್ದು, ನೋಯ್ಡಾದ ಸೆಕ್ಟರ್ 31ರ ಡಿ-5 ಬಂಗಲೆ ‘ಹೌಸ್ ಆಫ್ ಹಾರರ್ಸ್’ (ಭಯಾನಕತೆಯ ಮನೆ) ಎಂದೇ ಕುಖ್ಯಾತಿ ಪಡೆದಿತ್ತು.
ಘಟನೆ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಪಂಧೇರ್ ಮತ್ತು ಆತನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೋಲಿಯನ್ನು ಬಂಧಿಸಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಸಿಬಿಐ (CBI), ಕೊಲೆ, ಅಪಹರಣ, ಅತ್ಯಾಚಾರ ಮತ್ತು ಸಾಕ್ಷ್ಯ ನಾಶದ ಆರೋಪದಡಿ ಕೋಲಿ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿತು. ಪಂಧೇರ್ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಲಾಗಿತ್ತು.
2009ರಿಂದ 2017ರ ನಡುವೆ ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಕೋಲಿ ಅಪರಾಧಿ ಎಂದು ಸಾಬೀತಾಗಿದ್ದು, 12 ಪ್ರಕರಣಗಳಲ್ಲಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
2014ರಲ್ಲಿ ಗಲ್ಲು ಶಿಕ್ಷೆ ಜಾರಿಯಾಗುವ ಹಂತಕ್ಕೆ ತಲುಪಿದ್ದರೂ, ಕೊನೆಯ ಕ್ಷಣದಲ್ಲಿ ಸಲ್ಲಿಸಲಾದ ಅರ್ಜಿಯ ಆಧಾರದ ಮೇಲೆ ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿಗಳು ಮರಣದಂಡನೆಗೆ ತಡೆ ನೀಡಿದ್ದರು. ಹೀಗಾಗಿ ಕೋಲಿಗೆ ಗಲ್ಲು ಶಿಕ್ಷೆಯಿಂದ ತಾತ್ಕಾಲಿಕವಾಗಿ ರಕ್ಷಣೆ ದೊರೆತಿತ್ತು.
2025ರ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪು:
ನವೆಂಬರ್ 2025ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಕೋಲಿ ವಿರುದ್ಧದ 13ನೇ ಹಾಗೂ ಅಂತಿಮ ಪ್ರಕರಣಕ್ಕೆ ಸಂಬಂಧಿಸಿದ್ದಾಗಿತ್ತು. ಇದಕ್ಕೂ ಮುನ್ನವೇ 12 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದ ಕೋಲಿ, ಈ ಪ್ರಕರಣದಲ್ಲೂ ಖುಲಾಸೆಗೊಂಡು ನಿಥಾರಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಂದ ಮುಕ್ತನಾಗಿದ್ದ.
ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಕೋಲಿ ವಿರುದ್ಧದ ಸಂದರ್ಭೋಚಿತ ಸಾಕ್ಷ್ಯಗಳಿಗೆ ಅಗತ್ಯವಾದ ವಿಧಿವಿಜ್ಞಾನ (ಫೊರೆನ್ಸಿಕ್) ಬೆಂಬಲ ಇರಲಿಲ್ಲ ಎಂದು ಹೇಳಿತ್ತು. ಅಲ್ಲದೆ, ಅಂಗಾಂಗಗಳ ವ್ಯಾಪಾರ ನಡೆದಿರುವ ಶಂಕೆ ಸೇರಿದಂತೆ ಹಲವು ಪ್ರಮುಖ ಅಂಶಗಳ ಕುರಿತು ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ ಎಂದು ನ್ಯಾಯಾಲಯ ಉಲ್ಲೇಖಿಸಿತ್ತು.






