ದೇಶದ ಶೇ.40ರಷ್ಟು ವಾಯುಮಾಲಿನ್ಯಕ್ಕೆ ನಾನೇ ಹೊಣೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ನಿತಿನ್ ಗಡ್ಕರಿ (Photo: PTI)
ಹೊಸದಿಲ್ಲಿ: ದೇಶದಲ್ಲಿ ವಾಯುಮಾಲಿನ್ಯಕ್ಕೆ ಸಾರಿಗೆ ವಲಯವು ಗಣನೀಯ ಕೊಡುಗೆ ನೀಡುತ್ತಿದೆ ಎಂಬುದನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಕೊಂಡಿದ್ದು, ಸಾರಿಗೆ ಸಚಿವಾಲಯ ತನ್ನ ವ್ಯಾಪ್ತಿಗೆ ಬರುವುದರಿಂದ ದೇಶದ ಮಾಲಿನ್ಯದ ಶೇ.40ರಷ್ಟು ಭಾಗಕ್ಕೆ ತಾನೇ ಹೊಣೆ ಎಂದು ಭಾವಿಸುವುದಾಗಿ ಹೇಳಿದ್ದಾರೆ.
ಮಂಗಳವಾರ 14ನೇ ಸಿಐಐ ಬಯೋಎನರ್ಜಿ ಶೃಂಗಸಭೆಯಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ದೇಶವು ತೈಲ ಆಮದನ್ನು ಕಡಿಮೆ ಮಾಡಿಕೊಳ್ಳಲು ಮತ್ತು ದೇಶೀಯ ಇಂಧನ ಉತ್ಪಾದನೆಯನ್ನು ಹೆಚ್ಚಿಸಲು ಎಥೆನಾಲ್, ಜೈವಿಕ ಅನಿಲ (ಬಯೋಗ್ಯಾಸ್), ಹೈಡ್ರೋಜನ್ ಸೇರಿದಂತೆ ಪರ್ಯಾಯ ಇಂಧನಗಳ ಬಳಕೆಗೆ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಪ್ರತಿಪಾದಿಸಿದರು.
"ದಿಲ್ಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿನ ವಾಯುಮಾಲಿನ್ಯದ ಪರಿಸ್ಥಿತಿಯ ಬಗ್ಗೆ ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂತಹ ಸವಾಲುಗಳನ್ನು ಎದುರಿಸಲು ಪರ್ಯಾಯ ಇಂಧನಗಳು ಮತ್ತು ಜೈವಿಕ ಇಂಧನಗಳ ಬಳಕೆಗೆ ನಿರಂತರವಾಗಿ ಶ್ರಮಿಸಬೇಕಿದೆ. ಇಂದು ಎಲೆಕ್ಟ್ರಿಕ್ ವಾಹನಗಳು (EV) ಸಾಕಷ್ಟು ಜನಪ್ರಿಯವಾಗುತ್ತಿವೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ಟ್ರಕ್ಗಳು ಮತ್ತು ಬಸ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಅವುಗಳ ಪೂರೈಕೆಯಲ್ಲಿ ಕೊರತೆಯಿದೆ. ಭಾರತಕ್ಕೆ 1.50 ಲಕ್ಷ ವಿದ್ಯುತ್ ಬಸ್ಗಳ ಅಗತ್ಯವಿದೆ. ಆದರೆ, ಪ್ರಸ್ತುತ ಅವುಗಳ ಉತ್ಪಾದನಾ ಸಾಮರ್ಥ್ಯ ಕೇವಲ 7,000 ವಾಹನಗಳಿಗೆ ಸೀಮಿತವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದರು.
ಪರ್ಯಾಯ ಇಂಧನ ಅಥವಾ ಇಂಧನ ದಕ್ಷತೆಯ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವ ಉದ್ದೇಶದಿಂದ ತಮ್ಮ ಸಚಿವಾಲಯವು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.
‘ನಾನು ಸಚಿವನಾದಾಗ ಆಟೊಮೊಬೈಲ್ ಉದ್ಯಮ 14 ಲಕ್ಷ ಕೋಟಿಯಷ್ಟಿತ್ತು. ಇಂದು 22 ಲಕ್ಷ ಕೋಟಿ ಮೌಲ್ಯದ್ದಾಗಿದೆ. ಈ ಹಿಂದೆ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಜಾಗತಿಕವಾಗಿ ಏಳನೇ ಸ್ಥಾನದಲ್ಲಿದ್ದ ನಾವು ಜಪಾನ್ ಅನ್ನು ಹಿಂದಿಕ್ಕಿ ಇಂದು ಮೂರನೇ ಸ್ಥಾನದಲ್ಲಿದ್ದೇವೆ. ಈ ಕ್ಷೇತ್ರವು 4.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.
ನಾವು ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರರಾಗಿದ್ದೇವೆ. ಭಾರತದ ಇಂಧನದ ಶೇಕಡಾ 87 ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ, ಭವಿಷ್ಯದಲ್ಲಿ ಆಮದು ಕಡಿಮೆ ಮಾಡಲು ಮತ್ತು ರಫ್ತುಗಳನ್ನು ಹೆಚ್ಚಿಸಲು ನಾವು ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.







