Bihar | ಸಂಪುಟ ವಿಸ್ತರಣೆ; ನಿತೀಶ್ ಕುಮಾರ್ ಪುತ್ರ ನಿಶಾಂತ್ ಸೇರಿದಂತೆ 32 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

Photo Credit : PTI
ಪಾಟ್ನಾ, ಮೇ 7: ಪಾಟ್ನಾದ ಗಾಂಧಿ ಮೈದಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿ (ಯು) ಅಧ್ಯಕ್ಷ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಸೇರಿದಂತೆ 32 ಎನ್ಡಿಎ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿಯ 15ಕ್ಕಿಂತಲೂ ಅಧಿಕ ನಾಯಕರು, ಜೆಡಿ (ಯು)ನ 13, ಎಲ್ಜೆಪಿ (ಆರ್ವಿ)ಯ ಇಬ್ಬರು, ಎಚ್ಎಎಂ ಹಾಗೂ ಆರ್ಎಲ್ಎಂನ ತಲಾ ಒಬ್ಬ ನಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಂಪುಟಕ್ಕೆ ಐವರು ಹೊಸಬರನ್ನು ಸೇರಿಸಲಾಗಿದೆ.
ರಾಜ್ಯಪಾಲ ಲೆಫ್ಟಿನೆಂಟ್ ಸೈಯದ್ ಅಟಾ ಹಸ್ನೈನ್ (ನಿವೃತ್ತ) ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಹಾಗೂ ಆಡಳಿತಾರೂಢ ಮೈತ್ರಿಕೂಟದ ಇತರ ಹಲವು ಹಿರಿಯ ನಾಯಕರು ಪಾಲ್ಗೊಂಡಿದ್ದರು.




