Maharashtra | ನಾಪತ್ತೆಯಾದ ಬಾಲಕಿಯ ಶೋಧಕ್ಕೆ ವಾಹನದಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್ ಅಧಿಕಾರಿ!

Screengrab: X
ನಾಗ್ಪುರ: ಕಾಣೆಯಾದ ಅಪ್ರಾಪ್ತ ಬಾಲಕಿಯನ್ನು ಹುಡುಕಿಕೊಡಲು ಮನವಿ ಮಾಡಿಕೊಂಡ ಕುಟುಂಬಕ್ಕೆ ‘ಪೊಲೀಸ್ ವಾಹನದಲ್ಲಿ ಡೀಸೆಲ್ ಇಲ್ಲ’ ಎಂದು ಉತ್ತರಿಸಿದ ನಾಗ್ಪುರದ ಹಿರಿಯ ಪೊಲೀಸ್ ಅಧಿಕಾರಿಯನ್ನು ಸಾರ್ವಜನಿಕ ಆಕ್ರೋಶದ ಬಳಿಕ ನಿಯಂತ್ರಣ ಕೊಠಡಿಗೆ ವರ್ಗಾವಣೆ ಮಾಡಲಾಗಿದೆ.
ಪಂಚಪಾವೊಲಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಬಾಬುರಾವ್ ರಾವತ್ ಅವರ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಘಟನೆ ಮಹಾರಾಷ್ಟ್ರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ನ ಹಿರಿಯ ನಾಯಕ ವಿಜಯ್ ವಡೆಟ್ಟಿವಾರ್ ವಿಡಿಯೊ ಹಂಚಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಡಿಯೊದಲ್ಲಿ, “ನಮ್ಮ ವಾಹನದಲ್ಲಿ ಡೀಸೆಲ್ ಇಲ್ಲ. ನಿಮ್ಮ ಮಗಳನ್ನು ಹೇಗೆ ಹುಡುಕಲಿ? ಡೀಸೆಲ್ಗೆ ಹಣ ನೀಡಿ” ಎಂದು ಅಧಿಕಾರಿ ಹೇಳುತ್ತಿರುವುದು ಕೇಳಿಬಂದಿದೆ. ಈ ಹೇಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕುಟುಂಬದವರ ಪ್ರಕಾರ, ಅವರ ಅಪ್ರಾಪ್ತ ಮಗಳು ಸೋಮವಾರ ಬೆಳಿಗ್ಗೆಯಿಂದ ಕಾಣೆಯಾಗಿದ್ದಳು. ಅದೇ ದಿನ ಸಂಜೆ ಅವರು ತುರ್ತು ಸಹಾಯಕ್ಕಾಗಿ ಪಂಚಪಾವೊಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಆದರೆ, ಪೊಲೀಸರು ಸಹಾಯ ಮಾಡಲು ಮುಂದಾಗದೆ ನಿರ್ಲಕ್ಷ್ಯವಾಗಿ ವರ್ತಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಈ ಘಟನೆ ರಾಜ್ಯದ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿಯ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ. ಕಾಣೆಯಾದ ಬಾಲಕಿಯ ಶೋಧ ಕಾರ್ಯಕ್ಕೆ ‘ಡೀಸೆಲ್ ಕೊರತೆ’ ನೆಪ ನೀಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಖಂಡಿಸಿದ್ದಾರೆ.
ವಡೆಟ್ಟಿವಾರ್, “ಇದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಉದಾಹರಣೆ” ಎಂದು ಟೀಕಿಸಿದ್ದಾರೆ. ಗೃಹ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತವರು ನಗರ ನಾಗ್ಪುರದಲ್ಲೇ ಇಂತಹ ಘಟನೆ ನಡೆದಿರುವುದು ಆತಂಕಕಾರಿ ವಿಷಯ ಎಂದು ಹೇಳಿದ್ದಾರೆ.
ಸರ್ಕಾರವು ಪ್ರಚಾರ ಕಾರ್ಯಕ್ರಮಗಳಿಗೆ ಹೆಚ್ಚಿನ ವೆಚ್ಚ ಮಾಡುತ್ತಿದ್ದು, ಸಾರ್ವಜನಿಕ ಸುರಕ್ಷತೆಗೆ ಅಗತ್ಯ ಸೌಲಭ್ಯಗಳನ್ನು ಕಡೆಗಣಿಸಿದೆ ಎಂದು ಆರೋಪಿಸಿದ ಅವರು, “ಕಾಣೆಯಾದ ಬಾಲಕಿಯರನ್ನು ಹುಡುಕುವುದಕ್ಕಿಂತ ಡೀಸೆಲ್ ಉಳಿಸುವುದೇ ಮುಖ್ಯವೇ?” ಎಂದು ಪ್ರಶ್ನಿಸಿದ್ದಾರೆ. ನಾಗ್ಪುರದಲ್ಲೇ ಇಂತಹ ಪರಿಸ್ಥಿತಿ ಇದ್ದರೆ, ಇತರ ಜಿಲ್ಲೆಗಳ ಸ್ಥಿತಿಯೂ ಚಿಂತಾಜನಕವಾಗಿರಬಹುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ವಡೆಟ್ಟಿವಾರ್ ಸರ್ಕಾರವನ್ನು ಟೀಕಿಸಿ, ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಗಳ ಪರಿಸ್ಥಿತಿಯೂ ಇದೇ ರೀತಿಯಲ್ಲಿದೆಯೇ ಎಂದು ಪ್ರಶ್ನಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿದ್ದಂತೆ ನಾಗ್ಪುರ ಪೊಲೀಸ್ ಆಯುಕ್ತರ ಕಚೇರಿ ಬಾಬುರಾವ್ ರಾವತ್ ಅವರನ್ನು ನಿಯಂತ್ರಣ ಕೊಠಡಿಗೆ ವರ್ಗಾಯಿಸಿದೆ. ಪ್ರಕರಣದ ಕುರಿತು ಪರಿಶೀಲನೆ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ನವೀನ್ ರೆಡ್ಡಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವ ಹಾಗೂ ನಾಗ್ಪುರದ ಉಸ್ತುವಾರಿ ಸಚಿವ ಚಂದ್ರಶೇಖರ್ ಬವಾಂಕುಲೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
नागपूरसारख्या उपराजधानीत एक अल्पवयीन मुलगी बेपत्ता होते आणि पोलिसांचं उत्तर काय? गाडीत डिझेल नाही, शोधायला कसं जाणार? हा फक्त बेजबाबदारपणा नाही, तर संपूर्ण व्यवस्थेचं दिवाळं निघाल्याची कबुली आहे. नागपूर पोलिसांच्या गाडीत डिझेल नसेल तर मग राज्यात रुग्णवाहिका पासून इतर अत्यावश्यक… pic.twitter.com/WTP8FWHgRa
— Vijay Wadettiwar (@VijayWadettiwar) May 18, 2026






