ಏರ್ಇಂಡಿಯಾ ವಿಮಾನ ದುರಂತ : ಹೊಂದಿಕೆಯಾಗದ 8 ಮೃತರ ಕುಟುಂಬಗಳ ಡಿಎನ್ಎ ಮಾದರಿಗಳು
ಹೆಚ್ಚುವರಿ ಡಿಎನ್ಎ ಮಾದರಿ ಸಂಗ್ರಹಿಸಿದ ಅಧಿಕಾರಿಗಳು

Photo | PTI
ಅಹ್ಮದಾಬಾದ್ : ಡಿಎನ್ಎ ಹೊಂದಾಣಿಕೆಯಾಗದ ಕಾರಣ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತರಲ್ಲಿ ಎಂಟು ಮಂದಿಯ ಕುಟುಂಬಸ್ಥರ ಡಿಎನ್ಎ ಮಾದರಿಯನ್ನು ಮತ್ತೆ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯ ಸಿವಿಲ್ ಸೂಪರಿಂಟೆಂಡೆಂಟ್ ರಾಕೇಶ್ ಜೋಶಿ, ಡಿಎನ್ಎ ಹೊಂದಾಣಿಕೆಯಾಗದ ಹೊರತು ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ದೀರ್ಘಾವಧಿಯವರೆಗೆ ಡಿಎನ್ಎ ಹೊಂದಾಣಿಕೆಯಾಗದಿದ್ದರೆ ಇನ್ನೋರ್ವ ಸಂಬಂಧಿಕರಿಂದ ಡಿಎನ್ಎ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಓರ್ವ ಸಹೋದರ ಅಥವಾ ಸಹೋದರಿಯ ಡಿಎನ್ಎ ಮಾದರಿಯನ್ನು ನೀಡಿದ್ದರೆ ಅವರ ಡಿಎನ್ಎ ಹೊಂದಾಣಿಕೆಯಾಗದಿದ್ದಲ್ಲಿ ಮತ್ತೋರ್ವ ಸಹೋದರ ಅಥವಾ ಸಹೋದರಿಯ ಡಿಎನ್ಎ ಮಾದರಿಯನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.
ನಾವು ಸಾಮಾನ್ಯವಾಗಿ ತಂದೆ, ಮಗ ಅಥವಾ ಮಗಳ ಡಿಎನ್ಎ ಮಾದರಿಯನ್ನು ಸಂಗ್ರಹಿಸುತ್ತೇವೆ. ಇಲ್ಲವಾದಲ್ಲಿ ಲಭ್ಯವಿರುವ ಇನ್ನೋರ್ವ ಸದಸ್ಯರ ಮಾದರಿಯನ್ನು ಸಂಗ್ರಹಿಸುತ್ತೇವೆ. ಕನಿಷ್ಠ ಎಂಟು ಕುಟುಂಬಗಳ ಮೊದಲ ಡಿಎನ್ಎ ಮಾದರಿ ಹೊಂದಿಕೆಯಾಗಲಿಲ್ಲ. ಆದ್ದರಿಂದ ಮತ್ತೊಂದು ಮಾದರಿಯನ್ನು ಕೋರಲಾಗಿದೆ ಎಂದು ರಾಕೇಶ್ ಜೋಶಿ ಹೇಳಿದ್ದಾರೆ.
ವಿಮಾನ ದುರಂತದಲ್ಲಿ ಮೃತರಲ್ಲಿ 231 ಮಂದಿಯ ಡಿಎನ್ಎ ಮಾದರಿಗಳು ಈಗಾಗಲೇ ಹೊಂದಾಣಿಕೆಯಾಗಿದೆ. ಅದರಲ್ಲಿ 210 ಮಂದಿಯ ಮೃತದೇಹಗಳನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಡಿಎನ್ಎ ಹೊಂದಾಣಿಕೆ ಪ್ರಕ್ರಿಯೆಯು ಅತ್ಯಂತ ಸೂಕ್ಷ್ಮವಾಗಿದೆ. ಕಾನೂನು ಪ್ರೋಟೊಕಾಲ್ಗಳನ್ನು ಒಳಗೊಂಡಿರುವುದರಿಂದ ಇದನ್ನು ಅತ್ಯಂತ ಗಂಭೀರತೆಯಿಂದ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.







