ಪ್ರಧಾನಿಯ ಪದವಿ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ: ದಿಲ್ಲಿ ಹೈಕೋರ್ಟ್

ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯವು ಪ್ರಧಾನಿ ಮೋದಿಯ ಪದವಿ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಸೋಮವಾರ ತೀರ್ಪು ನೀಡಿದ್ದು, ಕೇಂದ್ರ ಮಾಹಿತಿ ಆಯುಕ್ತರು ಪದವಿ ವಿವರಗಳನ್ನು ಬಹಿರಂಗಪಡಿಸಲು ನಿರ್ದೇಶಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.
2016 ರಲ್ಲಿ ಕೇಂದ್ರ ಮಾಹಿತಿ ಆಯೋಗ (ಸಿಐಸಿ) 1978ರಲ್ಲಿ ಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡಿತ್ತು. ಅದೇ ವರ್ಷ ಪ್ರಧಾನಿ ನರೇಂದ್ರ ಮೋದಿ ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಎಂದು ಹೇಳಲಾಗಿತ್ತು. ಆದರೆ ದಿಲ್ಲಿ ವಿಶ್ವವಿದ್ಯಾಲಯವು ಸಿಐಸಿ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಈ ಆದೇಶಕ್ಕೆ 2017ರ ಜನವರಿಯಲ್ಲಿ ಅಂದರೆ ಮೊದಲ ವಿಚಾರಣೆಯಂದೇ ಕೋರ್ಟ್ ತಡೆಹಿಡಿದಿತ್ತು.
ವಿಚಾರಣೆಯ ಸಮಯದಲ್ಲಿ ವಿಶ್ವವಿದ್ಯಾಲಯದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಗೌಪ್ಯತೆಯ ಹಕ್ಕು ತಿಳಿದುಕೊಳ್ಳುವ ಹಕ್ಕಿಗಿಂತ ಹೆಚ್ಚಿನದು, ಆದ್ದರಿಂದ ಆರ್ಟಿಐ ಅರ್ಜಿಯ ಮೇಲಿನ ಸಿಐಸಿಯ ಆದೇಶವನ್ನು ರದ್ದುಗೊಳಿಸಬೇಕು ಎಂದು ವಾದಿಸಿದ್ದರು.





