ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (NPR) ಇನ್ನೂ ಬಂದಿಲ್ಲ ಅಧಿಸೂಚನೆ, ಆದರೆ ಕೇಂದ್ರ ಬಜೆಟ್ ನಲ್ಲಿ ರೂ. 6,000 ಕೋಟಿ ಅನುದಾನ!

ಜನರು ಮರೆತರೂ ಸರ್ಕಾರ ಎನ್‌ಪಿಆರ್ ಅನ್ನು ಮರೆತಿಲ್ಲ. ದೇಶದ ಸಾಮಾನ್ಯ ನಿವಾಸಿಗಳ ಪಟ್ಟಿಯಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ (NPR) ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಿವಾಸಿಗಳ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಆರು ವರ್ಷಗಳ ಹಿಂದೆ CAA, NRC ಜೊತೆಗೆ NPR ವಿರುದ್ಧವೂ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಆದಾಗ್ಯೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಾಗಿ ಅಧಿಸೂಚನೆ ಇನ್ನೂ ಬಂದಿಲ್ಲ. ಆದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1 ರವಿವಾರ ಮಂಡಿಸಿದ 2026-27 ರ ಕೇಂದ್ರ ಬಜೆಟ್ ನಲ್ಲಿ ಎನ್‌ಪಿಆರ್ ಮತ್ತು 2027 ರ ಜನಗಣತಿಗೆ ರೂ. 6,000 ಕೋಟಿ ಅನುದಾನ ನೀಡಲಾಗಿದೆ. ಜನಗಣತಿ ನಿಯಮಗಳ ಅಡಿಯಲ್ಲಿ ಎನ್‌ಪಿಆರ್ ಅನ್ನು ಜನಗಣತಿಯಲ್ಲಿ ಮನೆಗಳ ಪಟ್ಟಿ ಹಂತದ ಪ್ರಕ್ರಿಯೆಯೊಂದಿಗೆ ನಡೆಸಲಾಗುವುದು. ಮನೆಗಳ ಪಟ್ಟಿ ಹಂತದಲ್ಲಿ ದೇಶದ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಕಟ್ಟಡಗಳು ಮತ್ತು ಮನೆಗಳು ಯಾವ ರೀತಿಯದ್ದು ಎಂಬುದನ್ನು ದಾಖಲಿಸಲಾಗುತ್ತದೆ. ಈ ವರ್ಷ ಎಪ್ರಿಲ್ 1 ರಿಂದ ಸೆಪ್ಟೆಂಬರ್ 30 ರ ನಡುವೆ ಮನೆಗಳ ಪಟ್ಟಿ ಹಂತವನ್ನು ಕೈಗೊಳ್ಳಲು ಸೂಚಿಸಲಾಗಿದೆ. ಈ ಅಧಿಸೂಚನೆಯಲ್ಲಿ NPR ಬಗ್ಗೆ ಯಾವುದೇ ಉಲ್ಲೇಖವಿಲ್ಲ.
"ಜನಗಣತಿ, ಸಮೀಕ್ಷೆ ಮತ್ತು ಅಂಕಿಅಂಶಗಳು/ಭಾರತದ ರಿಜಿಸ್ಟ್ರಾರ್ ಜನರಲ್ (RGI)" ಶೀರ್ಷಿಕೆಯಡಿಯಲ್ಲಿ, ಕೇಂದ್ರ ಬಜೆಟ್ 6,000 ಕೋಟಿ ರೂ. ಅನುದಾನ ನೀಡಲಾಗಿದೆ. ಅದರಲ್ಲಿ 218 ಕೋಟಿ ರೂ.ಗಳು ಬಂಡವಾಳ ವೆಚ್ಚವಾಗಿದೆ. ಬಜೆಟ್ ಈ ಅನುದಾನವನ್ನು "ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಗೆ ನಿಬಂಧನೆಗಳು ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಮತ್ತು ಜನಗಣತಿ, 2027 ರ ವೆಚ್ಚ ಸೇರಿದಂತೆ RGI ಯ ವಿವಿಧ ಯೋಜನೆಗಳು" ಎಂದು ವಿವರಿಸುತ್ತದೆ.
ಮೇಲೆ ಹೇಳಿದಂತೆ ದೇಶದ “ಸಾಮಾನ್ಯ ನಿವಾಸಿಗಳ” ಪಟ್ಟಿ ಎನ್‌ಪಿಆರ್. ಇದರಲ್ಲಿ ಪೋಷಕರು, ಕುಟುಂಬ (ಹೆಂಡತಿ ಮತ್ತು ಮಕ್ಕಳು), ಹುಟ್ಟಿದ ದಿನಾಂಕ, ರಾಷ್ಟ್ರೀಯತೆ, ಮನೆಯ ಪ್ರಸ್ತುತ ವಿಳಾಸ ಮತ್ತು ಶಾಶ್ವತ ವಿಳಾಸ, ಉದ್ಯೋಗ ಮತ್ತು ಶೈಕ್ಷಣಿಕ ಅರ್ಹತೆಗಳ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಇದು ಸ್ವಯಂ ಘೋಷಣೆಯಾಗಿದ್ದು, ಇದರಲ್ಲಿ ಯಾವುದೇ ದಾಖಲೆಗಳ ಅಗತ್ಯವಿಲ್ಲ. 2019 ರಲ್ಲಿ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ನಂತರ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ನಡೆಸಲು ದಾರಿ ಮಾಡಿಕೊಡುತ್ತದೆ . ಅಲ್ಪಸಂಖ್ಯಾತರ ಪೌರತ್ವವನ್ನು ಕಸಿದುಕೊಳ್ಳಲು ಇದನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಲವಾರು ರಾಜ್ಯಗಳು ತಮ್ಮ ತಮ್ಮ ವಿಧಾನಸಭೆಗಳಲ್ಲಿ ಎನ್‌ಪಿಆರ್ ಪ್ರಕ್ರಿಯೆಯನ್ನು ವಿರೋಧಿಸಿ ನಿರ್ಣಯಗಳನ್ನು ಅಂಗೀಕರಿಸಿದವು. ಆಮೇಲೆ ಕೇಂದ್ರ ಸರ್ಕಾರ ಈ ಪ್ರಕ್ರಿಯೆಯನ್ನು ಪಕ್ಕಕ್ಕಿರಿಸಿದ್ದರೂ NPR ಪ್ರಕ್ರಿಯೆಗೆ ಆಗ 3,941.35 ಕೋಟಿ ರೂ.ಗಳನ್ನು ಅನುಮೋದಿಸಿತ್ತು. ಎನ್‌ಪಿಆರ್ ಪ್ರಕ್ರಿಯೆ 2020 ರಲ್ಲಿ ಜನಗಣತಿಯ ಮನೆ ಪಟ್ಟಿ ಹಂತದ ಜೊತೆಗೆ ನಡೆಯಬೇಕಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಯಿತು.
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಎನ್‌ಪಿಆರ್‌ಗೆ ಹಂಚಿಕೆ ಮಾಡಿರುವ ಬಗ್ಗೆ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು, ಎನ್‌ಪಿಆರ್ ನಡೆಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಎನ್‌ಪಿಆರ್ ನಡೆಸಲು ಯಾವುದೇ ಅಧಿಸೂಚನೆ ಬಂದಿಲ್ಲ. 2020-21 ರಿಂದ ಹಿಂದಿನ ಬಜೆಟ್‌ಗಳಲ್ಲಿ ಮಾಡಲಾದ ಮೊತ್ತಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಸರ್ಕಾರವು ಎನ್‌ಪಿಆರ್ ನಡೆಸಲು ನಿರ್ಧರಿಸಿದಾಗ, ಅಲ್ಲಿ ಅದಕ್ಕಾಗಿ ನಿಧಿ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅನುದಾನ ನೀಡಲಾಗಿದೆ ಎಂದು ಹೇಳಿರುವುದಾಗಿ ʼಇಂಡಿಯನ್ ಎಕ್ಸ್ ಪ್ರೆಸ್ʼ ವರದಿ ಮಾಡಿದೆ.
ಕಾನೂನಿನಲ್ಲಿ ಏನು ಹೇಳಲಾಗಿದೆ?
NPR ಎಂಬುದು ರಾಷ್ಟ್ರೀಯ ನಾಗರಿಕರ ನೋಂದಣಿಗೆ ಅಗತ್ಯವಿರುವ ಮೊದಲ ಹೆಜ್ಜೆಯಾಗಿದ್ದು, ಕಾನೂನಿನಲ್ಲಿಯೂ ಅದನ್ನೇ ಹೇಳಲಾಗಿದೆ. ಎನ್‌ಪಿಆರ್ ಅನ್ನು ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳು, 2003 ರಿಂದ ನಿಯಂತ್ರಿಸಲಾಗುತ್ತದೆ. ನಿಯಮಗಳನ್ನು 1955 ರ ಪೌರತ್ವ ಕಾಯ್ದೆಯ ಸೆಕ್ಷನ್ 18 ರ ಉಪವಿಭಾಗಗಳು (1) ಮತ್ತು (3) ರ ಅಡಿಯಲ್ಲಿ ರೂಪಿಸಲಾಗಿದೆ.
ಎನ್ಆರ್ ಸಿಗೆ ಅವಕಾಶ ನೀಡುವ ನಿಯಮ 3 ಮತ್ತು ಉಪ-ನಿಯಮ (4) ರ ಪ್ರಕಾರ, ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಹೊರಡಿಸಲಾದ ಆದೇಶದ ಮೂಲಕ, ಸಾಮಾನ್ಯವಾಗಿ ಸ್ಥಳೀಯ ನೋಂದಣಿದಾರರ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ಜನಸಂಖ್ಯಾ ನೋಂದಣಿಯನ್ನು ಸಿದ್ಧಪಡಿಸುವ ದಿನಾಂಕವನ್ನು ನಿರ್ಧರಿಸಬಹುದು.
ನಿಯಮದ ಉಪ-ನಿಯಮ (5) “ಭಾರತೀಯ ನಾಗರಿಕರ ಸ್ಥಳೀಯ ನೋಂದಣಿಯು ಜನಸಂಖ್ಯಾ ನೋಂದಣಿಯಿಂದ ಸರಿಯಾದ ಪರಿಶೀಲನೆಯ ನಂತರ ವ್ಯಕ್ತಿಗಳ ವಿವರಗಳನ್ನು ಹೊಂದಿರಬೇಕು ಎಂದು ಹೇಳುತ್ತದೆ.
"ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿಯ ಸಿದ್ಧತೆ" ಎಂಬ ಶೀರ್ಷಿಕೆಯ ನಿಯಮ 4 ರ ಅಡಿಯಲ್ಲಿ, ಉಪ-ನಿಯಮ 4 ಹೀಗೆ ಹೇಳುತ್ತದೆ- "ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ, ಪೌರತ್ವ ಸಂದೇಹಾಸ್ಪದವಾಗಿರುವ ವ್ಯಕ್ತಿಗಳ ವಿವರಗಳನ್ನು ಸ್ಥಳೀಯ ನೋಂದಣಿದಾರರು ಹೆಚ್ಚಿನ ವಿಚಾರಣೆಗಾಗಿ ಜನಸಂಖ್ಯಾ ನೋಂದಣಿಯಲ್ಲಿ ಸೂಕ್ತ ಟಿಪ್ಪಣಿಯೊಂದಿಗೆ ನಮೂದಿಸಬೇಕು. ಸಂದೇಹಾಸ್ಪದ ಪೌರತ್ವದ ಸಂದರ್ಭದಲ್ಲಿ, ಪರಿಶೀಲನಾ ಪ್ರಕ್ರಿಯೆ ಮುಗಿದ ತಕ್ಷಣ ವ್ಯಕ್ತಿ ಅಥವಾ ಕುಟುಂಬಕ್ಕೆ ನಿರ್ದಿಷ್ಟಪಡಿಸಿದ ಫಾರ್ಮ ನಲ್ಲಿ ತಿಳಿಸಬೇಕು."
ನಿಯಮ 7 ರ ಅಡಿಯಲ್ಲಿ, ಕುಟುಂಬದ ಮುಖ್ಯಸ್ಥರು ಎನ್‌ಪಿಆರ್ ಪ್ರಕ್ರಿಯೆಯ ಸಮಯದಲ್ಲಿ ಗಣತಿದಾರರಿಗೆ ಸರಿಯಾದ ಮಾಹಿತಿಯನ್ನು ಒದಗಿಸಬೇಕು. ಮಾಹಿತಿ ನೀಡಲು ವಿಫಲವಾದರೆ ಅವರಿಗೆ (ನಿಯಮ 17 ರ ಅಡಿಯಲ್ಲಿ) 1,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.
2011 ರ ಜನಗಣತಿಯ ಮನೆ ಪಟ್ಟಿ ಹಂತದ ಜೊತೆಗೆ ಎನ್‌ಪಿಆರ್‌ಗಾಗಿ ಡೇಟಾವನ್ನು ಮೊದಲು 2010 ರಲ್ಲಿ ಸಂಗ್ರಹಿಸಲಾಯಿತು. 2015 ರಲ್ಲಿ, ಮನೆ-ಮನೆ ಸಮೀಕ್ಷೆಯಲ್ಲಿ ಈ ಡೇಟಾವನ್ನು ಮತ್ತಷ್ಟು ನವೀಕರಿಸಲಾಯಿತು.
2016 ರಲ್ಲಿ, ಮೋದಿ ಸರ್ಕಾರವು ಕಲ್ಯಾಣ ಸವಲತ್ತುಗಳನ್ನು ನೀಡಲು ಆಧಾರ್ ಅನ್ನು ಪ್ರಮುಖ ಮಾರ್ಗವಾಗಿ ಬಳಸಲು ನಿರ್ಧರಿಸಿತು. ಎಲ್ಲದಕ್ಕೂ ಆಧಾರ್ ಸಂಖ್ಯೆಯನ್ನೇ ಆಧಾರವಾಗಿರಿಸಿದ ಕಾರಣ ಎನ್‌ಪಿಆರ್ ಗೆ ನೀಡುತ್ತಿದ್ದ ಆದ್ಯತೆಯೂ ಕಡಿಮೆ ಆಯಿತು. ಆಗಸ್ಟ್ 3, 2019 ರಂದು ಅಧಿಸೂಚನೆಯ ಮೂಲಕ, ಭಾರತದ ರಿಜಿಸ್ಟ್ರಾರ್ ಜನರಲ್ (RGI) ಅದನ್ನು ಪುನರುಜ್ಜೀವನಗೊಳಿಸಿದರು. RGI ಈಗಾಗಲೇ ಎನ್‌ಪಿಆರ್ ಪ್ರೊಫಾರ್ಮಾವನ್ನು ಸಿದ್ಧಪಡಿಸಿದ್ದು 2015 ರ ದತ್ತಾಂಶದ ಡಿಜಿಟಲೀಕರಣ ಪೂರ್ಣಗೊಂಡಿದೆ.
►ಪ್ರತಿಭಟನೆಗಳು
ಸಿಎಎ, ಪ್ರಸ್ತಾವಿತ ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಮತ್ತು ಅಸ್ಸಾಂನಲ್ಲಿ 19 ಲಕ್ಷ ಜನರನ್ನು ಪಟ್ಟಿಯಿಂದ ಹೊರಗಿಟ್ಟ ಎನ್‌ಆರ್‌ಸಿ ಪ್ರಕ್ರಿಯೆಯ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆ ನಡೆದಿತ್ತು. ಇದು ದೇಶದಲ್ಲಿ ಪೌರತ್ವದ ಕಲ್ಪನೆಯ ಸುತ್ತಲಿನ ಆತಂಕವನ್ನು ಹೆಚ್ಚಿಸಿತು. ಆ ಸಮಯದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪದೇ ಪದೇ ರಾಷ್ಟ್ರವ್ಯಾಪಿ ಎನ್ಆರ್ ಸಿ ಇರುತ್ತದೆ ಎಂದು ಹೇಳುತ್ತಿದ್ದರು. ಸಿಎಎ ಮೊದಲು ಬಂದು ನಂತರ ಎನ್‌ಆರ್‌ಸಿ ಜಾರಿಗೆ ಬರುವ "ಕ್ರೊನೋಲಜಿ"ಯನ್ನು ಅವರು ವಿವರಿಸಲು ಪ್ರಯತ್ನಿಸಿದರು. ಆದಾಗ್ಯೂ, ಸಿಎಎ ವಿರುದ್ಧದ ಪ್ರತಿಭಟನೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 2019 ರಲ್ಲಿ ಸರ್ಕಾರವು ಎನ್‌ಆರ್‌ಸಿ ನಡೆಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದರು.







