Fact Check | ವೈರಲ್ ಆಗುತ್ತಿರುವುದು ಸೌದಿಯಲ್ಲಿ ಗಲ್ಲುಶಿಕ್ಷೆಗೆ ಒಳಗಾದ ಬಾಂಗ್ಲಾದೇಶಿ ಪ್ರಜೆಗಳ ಫೋಟೊವಲ್ಲ!
ಈಜಿಪ್ಟ್ ನ ದಂಪತಿಯ ಹಳೆಯ ಫೋಟೊ ಬಳಸಿ ಸುಳ್ಳು ಪ್ರಚಾರ; ಮರಣದಂಡನೆ ಪ್ರಕರಣದ ಬಗ್ಗೆ ಅಧಿಕೃತ ಮಾಹಿತಿಯಲ್ಲಿ ಹಲವು ವಿವರಗಳಿಲ್ಲ

Photo Credit : x
ಹೊಸದಿಲ್ಲಿ: ಮಕ್ಕಾದ ಮಸ್ಜಿದ್ ಉಲ್-ಹರಮ್ ನಲ್ಲಿ ದಂಪತಿಯೊಬ್ಬರು ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಪವಿತ್ರ ಸ್ಥಳದಲ್ಲಿ ಪತ್ನಿಯ ಹೊಟ್ಟೆಗೆ ಮುತ್ತಿಟ್ಟಿದ್ದಕ್ಕಾಗಿ ಬಾಂಗ್ಲಾದೇಶದ ನವ ದಂಪತಿಗೆ ಸೌದಿ ಅರೇಬಿಯ ಗಲ್ಲುಶಿಕ್ಷೆ ವಿಧಿಸಿದೆ ಎಂಬ ಹೇಳಿಕೆಯೊಂದಿಗೆ ಈ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ವೈರಲ್ ಚಿತ್ರಕ್ಕೂ ಮರಣದಂಡನೆಗೆ ಒಳಗಾದ ಬಾಂಗ್ಲಾದೇಶದ ಪ್ರಜೆಗಳಿಗೂ ಯಾವುದೇ ಸಂಬಂಧವಿಲ್ಲ. ಇದು ದಾರಿತಪ್ಪಿಸುವ ಪ್ರಚಾರ ಎಂಬುದು ಪರಿಶೀಲನೆಯಿಂದ ತಿಳಿದುಬಂದಿದೆ.
ವೈರಲ್ ಚಿತ್ರದ ಬಗ್ಗೆ ಹೇಳುತ್ತಿರುವುದೇನು?
ಸುಪ್ರೀಂ ಕೋರ್ಟ್ ವಕೀಲ ಶಶಾಂಕ್ ಶೇಖರ್ ಝಾ ಸೇರಿದಂತೆ ಹಲವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಸೌದಿ ಅರೇಬಿಯವು ಬಾಂಗ್ಲಾದೇಶದ ನವ ದಂಪತಿಗಳಾದ ನಝ್ರುಲ್ ಇಸ್ಲಾಂ ಅಬ್ದುಲ್ ಬಸಿರ್ ಮತ್ತು ಸಿಟಿ ಅಖ್ತರ್ ಅವರನ್ನು ಗಲ್ಲಿಗೇರಿಸಿದೆ. ನಝ್ರುಲ್ ಮಕ್ಕಾದ ಮಸೀದಿಯೊಂದರಲ್ಲಿ ತನ್ನ ಗರ್ಭಿಣಿ ಪತ್ನಿಯ ಹೊಟ್ಟೆಗೆ ಮುತ್ತಿಟ್ಟಿದ್ದ ಅಷ್ಟೇ’ ಎಂಬ ಬರಹದೊಂದಿಗೆ ಚಿತ್ರವನ್ನು ಪ್ರಕಟಿಸಲಾಗಿದೆ.
ಮರಣದಂಡನೆ ವಿಧಿಸಿದ್ದು ನಿಜ; ಕಾರಣದ ಬಗ್ಗೆ ಸ್ಪಷ್ಟತೆಯಿಲ್ಲ
ಸೌದಿ ಅರೇಬಿಯದ ಮಕ್ಕಾದ ಪವಿತ್ರ ಸ್ಥಳ ಮಸ್ಜಿದ್ ಉಲ್ ಹರಂನಲ್ಲಿ ಅಸಭ್ಯ ಕೃತ್ಯ ಎಸಗಿದ್ದಕ್ಕಾಗಿ ಬಾಂಗ್ಲಾದೇಶದ ಇಬ್ಬರು ಪ್ರಜೆಗಳಿಗೆ ಮರಣದಂಡನೆ ವಿಧಿಸಿರುವುದು ನಿಜ. ಆದರೆ, ಅವರು ಎಸಗಿದ ಕೃತ್ಯದ ಸ್ವರೂಪ ಅಥವಾ ಮರಣದಂಡನೆಯನ್ನು ಜಾರಿಗೊಳಿಸಿದ ರೀತಿಯ ಬಗ್ಗೆ ಅಧಿಕೃತ ಪ್ರಕಟಣೆಯಲ್ಲಿ ವಿವರಗಳಿಲ್ಲ.
ಸಂಬಂಧಿತ ಕೀವರ್ಡ್ ಗಳನ್ನು ಬಳಸಿ ನಡೆಸಿದ ಹುಡುಕಾಟದಲ್ಲಿ BBC ವರದಿಯೊಂದು ಲಭ್ಯವಾಗಿದೆ. ಬಾಂಗ್ಲಾದೇಶದ ಒಬ್ಬ ಪುರುಷ ಮತ್ತು ಮಹಿಳೆಗೆ ಮರಣದಂಡನೆ ವಿಧಿಸಿರುವುದನ್ನು ವರದಿ ದೃಢಪಡಿಸಿದೆ. ಆದರೆ, ಅವರ ನಡುವಿನ ಸಂಬಂಧ ಅಥವಾ ಅವರು ಎಸಗಿದ ಕೃತ್ಯದ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿಲ್ಲ.
ಬಾಂಗ್ಲಾದೇಶದ ಸುದ್ದಿ ಸಂಸ್ಥೆ 'ಜಾಗೋ ನ್ಯೂಸ್ 24' ಮೃತ ವ್ಯಕ್ತಿಯ ತಂದೆಯನ್ನು ಸಂಪರ್ಕಿಸಿತ್ತು. ಆ ಮಹಿಳೆ ತನ್ನ ಮಗನ ಪತ್ನಿಯಲ್ಲ ಮತ್ತು ಆಕೆ ಯಾರೆಂಬುದು ತಮಗೆ ತಿಳಿದಿಲ್ಲ ಎಂದು ಅವರು ಹೇಳಿರುವುದಾಗಿ ವರದಿ ಮಾಡಿದೆ.
ಸೌದಿ ಅರೇಬಿಯದ ಅಧಿಕೃತ ಪ್ರಕಟಣೆಗಳನ್ನು ಪ್ರಕಟಿಸುವ ಸೌದಿ ಪ್ರೆಸ್ ಏಜೆನ್ಸಿ (SPA) ವೆಬ್ಸೈಟ್ನಲ್ಲಿ 2026ರ ಅಕ್ಟೋಬರ್ 14ರಂದು ಪ್ರಕಟವಾದ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದ ಇಬ್ಬರು ಪ್ರಜೆಗಳಾದ ನಝ್ರುಲ್ ಇಸ್ಲಾಂ ಅಬ್ದುಲ್ ಬಸಿರ್ ಮತ್ತು ಸಿಟಿ ಅಖ್ತರ್ ಅವರಿಗೆ ಪವಿತ್ರ ನಗರದ ಮಸೀದಿಯೊಂದರಲ್ಲಿ ಅಸಭ್ಯ ಕೃತ್ಯ ಎಸಗಿದ್ದಕ್ಕಾಗಿ ಮರಣದಂಡನೆ ವಿಧಿಸಲಾಗಿತ್ತು.
ಹಳೆಯ ಫೋಟೊ ಬಳಸಿ ತಪ್ಪು ಮಾಹಿತಿ
ವೈರಲ್ ಚಿತ್ರವನ್ನು ಆಧರಿಸಿ ನಡೆಸಿದ 'ರಿವರ್ಸ್ ಇಮೇಜ್ ಸರ್ಚ್'ನಲ್ಲಿ 2024ರ ಡಿಸೆಂಬರ್ 24ರಂದು ಫೇಸ್ಬುಕ್ ನಲ್ಲಿ ಪ್ರಕಟವಾದ ಪೋಸ್ಟ್ ಪತ್ತೆಯಾಗಿದೆ. ಬ್ಲಾಗರ್ ಝೆಹಾದ್ ಉಲ್-ಬನ್ನಾ ಮತ್ತು ಅವರ ಪತಿ ನಡೆಸಿದ ಮೆಟರ್ನಲ್ ಫೋಟೋಶೂಟ್ ನ ಚಿತ್ರವಿದು ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು.
ಹೆಚ್ಚಿನ ಪರಿಶೀಲನೆಯ ವೇಳೆ ಮಹಿಳೆಯನ್ನು ಈಜಿಪ್ಟ್ ನ ಸಾಮಾಜಿಕ ಜಾಲತಾಣ ಪ್ರಭಾವಿ ಝೆಹಾದ್ ಉಲ್ ಬನ್ನಾ ಎಂದು ಗುರುತಿಸಲಾಗಿದೆ. ಅವರು 2024ರ ಡಿಸೆಂಬರ್ 23ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಚಿತ್ರಕ್ಕೆ ಹೋಲುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಪತಿಯನ್ನು ಟ್ಯಾಗ್ ಮಾಡಿದ್ದ ಪೋಸ್ಟ್ ನಲ್ಲಿ ಗರ್ಭಧಾರಣೆಯ ಸುದ್ದಿಯನ್ನು ಪ್ರಕಟಿಸಿದ್ದರು.
ಅವರ ಪತಿ ರಮ್ಝಿ ಮಹಮೂದ್ ಕೂಡ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿದ್ದರು. ಅದರಲ್ಲಿ ಅವರು ಎಲ್ಬಾನಾ ಅವರ ಹೊಟ್ಟೆಗೆ ಮುತ್ತಿಡುವ ದೃಶ್ಯಗಳಿದ್ದವು.
Fact Check:
ಸೌದಿ ಅರೇಬಿಯದಲ್ಲಿ ಮರಣದಂಡನೆಗೆ ಒಳಗಾದ ಬಾಂಗ್ಲಾದೇಶದ ಇಬ್ಬರು ಪ್ರಜೆಗಳ ಪ್ರಕರಣಕ್ಕೆ ಈಜಿಪ್ಟ್ ನ ದಂಪತಿಯ 2024ರ ಹಳೆಯ ಚಿತ್ರವನ್ನು ತಪ್ಪಾಗಿ ಲಿಂಕ್ ಮಾಡಲಾಗಿದೆ. ಪತ್ನಿಯ ಹೊಟ್ಟೆಗೆ ಮುತ್ತಿಟ್ಟಿದ್ದಕ್ಕಾಗಿ ಬಾಂಗ್ಲಾದೇಶದ ದಂಪತಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ ಎಂಬುದಕ್ಕೆ ಲಭ್ಯವಿರುವ ಮಾಹಿತಿಯಲ್ಲಿ ಯಾವುದೇ ಪುರಾವೆಯಿಲ್ಲ. ಹೀಗಾಗಿ, ವೈರಲ್ ಚಿತ್ರದೊಂದಿಗೆ ಮಾಡಲಾಗಿರುವ ಹೇಳಿಕೆ ದಾರಿತಪ್ಪಿಸುವಂತಿದೆ.
ಸೌಜನ್ಯ: the quint






