50 ರೂ. ನಾಣ್ಯ ಪರಿಚಯಿಸುವ ಪ್ರಸ್ತಾವನೆಯಿಲ್ಲ: ದಿಲ್ಲಿ ಹೈಕೋರ್ಟ್ ಗೆ ಕೇಂದ್ರ ಸರಕಾರದ ಹೇಳಿಕೆ

PC : indiagovtmint.in
ಹೊಸದಿಲ್ಲಿ: 10 ರೂ., 20 ರೂ. ನಾಣ್ಯದ ನಂತರ 50 ರೂ. ಮೌಲ್ಯದ ನಾಣ್ಯವನ್ನು ಪರಿಚಯಿಸಲಾಗುತ್ತದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಕೇಂದ್ರ ಸರಕಾರ, ಸದ್ಯ 50 ರೂ. ಮುಖಬೆಲೆಯ ನಾಣ್ಯ ಪರಿಚಯಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರಕಾರ ದಿಲ್ಲಿ ಹೈಕೋರ್ಟ್ಗೆ ತಿಳಿಸಿದೆ.
50 ರೂ. ಮುಖಬೆಲೆಯ ಬ್ಯಾಂಕ್ ನೋಟುಗಳ ಬದಲಿಗೆ 50 ರೂ. ಮುಖಬೆಲೆಯ ನಾಣ್ಯ ಪರಿಚಯಿಸಲಾಗುತ್ತದೆ ಎಂದು ಈ ಮುನ್ನ ವದಂತಿಗಳು ಹರಡಿದ್ದವು.
ಸಾರ್ವಜನಿಕರಿಗೆ 50 ರೂ. ಮುಖಬೆಲೆಯ ನಾಣ್ಯಗಳನ್ನು ವಿತರಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ದಿಲ್ಲಿ ಹೈಕೋರ್ಟ್ಗೆ ಸಲ್ಲುಕೆಯಾಗಿರುವ ಅರ್ಜಿಗೆ ಪ್ರತಿಯಾಗಿ ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಮಂಗಳವಾರ ನ್ಯಾಯಾಲಯದೆದುರು ಈ ಹೇಳಿಕೆ ದಾಖಲಿಸಿದೆ.
"50 ರೂ. ಮುಖಬೆಲೆಯ ನಾಣ್ಯವನ್ನು ಪರಿಚಯಿಸುವ ಕಾರ್ಯಸಾಧ್ಯತೆ ಕುರಿತು 2022ರಲ್ಲಿ ಚಾಲ್ತಿಯಲ್ಲಿರುವ ನಾಣ್ಯಗಳ ಬಳಕೆಯ ಮಾದರಿಗಳ ಕುರಿತು ವಿಶ್ಲೇಷಣೆ ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಮೀಕ್ಷೆಯೊಂದನ್ನು ನಡೆಸಿತ್ತು. ಈ ಸಮೀಕ್ಷೆಯ ಶೋಧನೆಯಲ್ಲಿ ಜನರು 10 ರೂ. ಹಾಗೂ 20 ರೂ. ಮುಖಬೆಲೆಯ ಮೇಲ್ಪಟ್ಟ ನಗದು ವ್ಯವಹಾರಗಳಲ್ಲಿ ನಾಣ್ಯದ ಬದಲು ಬ್ಯಾಂಕ್ ನೋಟುಗಳನ್ನೇ ಪರಿಗಣಿಸುವುದು ಕಂಡು ಬಂದಿತ್ತು" ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯು ಹೈಕೋರ್ಟ್ಗೆ ತಿಳಿಸಿತು.
ಈ ಸಮೀಕ್ಷೆಯ ವೇಳೆ, ಜನರು ನಾಣ್ಯದ ತೂಕ ಹಾಗೂ ಒಂದೇ ಅಳತೆಯಲ್ಲಿರುವ ವಿವಿಧ ಮುಖಬೆಲೆಯ ನಾಣ್ಯಗಳಿಂದಾಗಿ ಗಮನಾರ್ಹ ಸಮಸ್ಯೆಯುಂಟಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು ಎಂದೂ ನ್ಯಾಯಾಲಯಕ್ಕೆ ತಿಳಿಸಲಾಗಿದೆ.







