ಸಿಜೆಐ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಕರಣ; ಘಟನೆ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ; ಆರೋಪಿ ವಕೀಲ

ಸಿಜೆಐ ಬಿ.ಆರ್. ಗವಾಯಿ / ಆರೋಪಿ ರಾಕೇಶ್ ಕಿಶೋರ್ (Photo credit: indiatoday.in)
ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದ ಆರೋಪಿ ವಕೀಲ ರಾಕೇಶ್ ಕಿಶೋರ್, ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, "ನಾನು ಸರಿಯಾದುದ್ದನ್ನೇ ಮಾಡಿದ್ದೇನೆ. ಘಟನೆ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾನೆ.
"ಇದಕ್ಕೆ ದೇವರು ಪ್ರೇರಣೆ ನೀಡಿದ್ದು" ಎಂದು ಹೇಳಿಕೊಂಡಿರುವ ಅವರು, ಈ ದಾಳಿಗೆ ಮುನ್ನ ಎಲ್ಲ ಪರಿಣಾಮಗಳ ಬಗ್ಗೆ ಚಿಂತನೆ ನಡೆಸಿದ್ದಾಗಿ ತಿಳಿಸಿದ್ದಾನೆ.
"ನಾನು ಜೈಲುಪಾಲಾಗುತ್ತೇನೆ, ಅಲ್ಲಿ ನರಕ ಯಾತನೆ ಅನುಭವಿಸಬೇಕಾಗುತ್ತದೆ.. ಹೀಗೆ ಎಲ್ಲಾ ಪರಿಣಾಮಗಳನ್ನು ನಾನು ಪರಿಗಣಿಸಿದ್ದೆ... ಆದರೆ ದೇವರ ಹೆಸರಿನಲ್ಲಿ ಹಾಗೆ ಮಾಡಿದ್ದೆ.. ಏಕೆಂದರೆ ಇದನ್ನು ಮಾಡುವಂತೆ ಪ್ರೇರಣೆ ನೀಡಿದ್ದು ದೇವರು" ಎಂದು ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿದ ವಕೀಲ ವಿವರಿಸಿದ್ದಾನೆ.
ಕೋರ್ಟ್ ನಂ. 1ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಆರೋಪಿ ವಕೀಲ ಸಿಜೆಐ ಅವರತ್ತ ಶೂ ಎಸೆದಿದ್ದು, ಘಟನೆಯ ಬೆನ್ನಲ್ಲೇ ಅಖಿಲ ಭಾರತ ವಕೀಲರ ಮಂಡಳಿ ಆತನ ಸದಸ್ಯತ್ವವನ್ನು ರದ್ದುಪಡಿಸಿದೆ. ಕಿಶೋರ್ನ ನಡತೆ ನ್ಯಾಯಾಲಯದ ಘನತೆಗೆ ತಕ್ಕುದಾದುದ್ದಲ್ಲ ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅಭಿಪ್ರಾಯಪಟ್ಟಿದ್ದು, ಇದು ವಕೀಲರ ಕಾಯ್ದೆ-1961 ಹಾಗೂ ವೃತ್ತಿಪರ ನಡತೆ ಬಗೆಗಿನ ಕಾನೂನಿನ ಉಲ್ಲಂಘನೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಇದುವರೆಗೆ ಆರೋಪಿ ವಕೀಲನ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವಕೀಲನನ್ನು ಕೋರ್ಟ್ ನಿಂದ ಹೊರ ಹಾಕುತ್ತಿರುವ ವೇಳೆ, "ಸನಾತನ ಧರ್ಮಕ್ಕೆ ಅವಮಾನವಾಗುವುದನ್ನು ನಾವು ಸಹಿಸುವುದಿಲ್ಲ" ಎಂಬ ಘೋಷಣೆ ಕೂಗಿದ್ದು ಕೇಳಿಬಂದಿತ್ತು. ಇದರಿಂದ ವಿಚಲಿತರಾಗದ ಸಿಜೆಐ, ತಾವು ನಡೆಸುತ್ತಿದ್ದ ಪ್ರಕರಣದಲ್ಲಿ ವಾದ ಮಂಡನೆ ಮುಂದುವರಿಸುವಂತೆ ವಕೀಲರಿಗೆ ಸೂಚಿಸಿದರು.







