Fact Check : ಭಾರತದ ರಫೇಲ್ ಜೆಟ್ಗಳನ್ನು ಪಾಕ್ ಹೊಡದುರಳಿಸಿದೆ ಎಂದು ಎಸ್ ಜೈಶಂಕರ್ ಒಪ್ಪಿಕೊಂಡಿಲ್ಲ!

Photo | indiatoday
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ವೇಳೆ ಪಾಕಿಸ್ತಾನ ಮೂರು ಭಾರತೀಯ ರಫೇಲ್ ಜೆಟ್ಗಳನ್ನು ಹೊಡೆದುರುಳಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ಹೇಳಿಕೆಯನ್ನು ನೀಡಿರುವುದು ನಿಜವೇ? ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವೀಡಿಯೊ ಮತ್ತು ಪೋಸ್ಟ್ನ ಅಸಲಿಯತ್ತೇನು?
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆ ಪಾಕ್ ಸೇನೆ ಭಾರತದ ರಫೇಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ ಎಂಬ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಈ ಕುರಿತ ವೀಡಿಯೊವನ್ನು ಹಂಚಿಕೊಂಡ ಎಕ್ಸ್ ಬಳಕೆದಾರರು, ʼಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಮೂರು ರಫೇಲ್ಗಳು ಸೇರಿದಂತೆ ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವ ಬಗ್ಗೆ ಕೊನೆಗೂ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಈ ಕೃತ್ಯ ತುಂಬಾ ಅನ್ಯಾಯವಾಗಿದೆ ಎಂದು ಹೇಳಿದ್ದಾರೆʼ ಎಂದು ಪೋಸ್ಟ್ನಲ್ಲಿ ಹೇಳಿದ್ದರು.
ವಾಸ್ತವವೇನು?
ಭಾರತ- ಪಾಕ್ ನಡುವಿನ ಸಂಘರ್ಷದ ವೇಳೆ ಭಾರತದ ಮೂರು ರಫೇಲ್ ಜೆಟ್ಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎನ್ನುವ ವೀಡಿಯೊ ನಕಲಿ ಎಂಬುದು India Today ಸತ್ಯ ಶೋಧನೆ ವೇಳೆ ಬಯಲಾಗಿದೆ.
ಮೂಲ ವೀಡಿಯೊದಲ್ಲಿ ಜೈಶಂಕರ್, ಭಾರತ ಮೂರು ರಫೇಲ್ ಜೆಟ್ಗಳನ್ನು ಕಳೆದುಕೊಂಡ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ವೀಡಿಯೊವನ್ನು AI ಪರಿಕರಗಳನ್ನು ಬಳಸಿಕೊಂಡು ಮಾರ್ಪಡು ಮಾಡಲಾಗಿದೆ ಎಂದು India Today ಹೇಳಿದೆ.
ʼವೈರಲ್ ವೀಡಿಯೊ ಕುರಿತು ಪರಿಶೀಲನೆ ನಡೆಸಿದಾಗ ಜುಲೈ 1ರಂದು Newsweek ಅಧಿಕೃತ ಯೂಟ್ಯೂಬ್ ಚಾನೆಲ್ಗೆ ಅಪ್ಲೋಡ್ ಮಾಡಲಾದ ಮೂಲ ವೀಡಿಯೊ ನಮಗೆ ಸಿಕ್ಕಿದೆ. 49 ನಿಮಿಷ ಮತ್ತು 5 ಸೆಕೆಂಡುಗಳ ವೀಡಿಯೊದಲ್ಲಿ ಎಸ್ ಜೈಶಂಕರ್ ಮತ್ತು Newsweek ಸಿಇಒ ದೇವ್ ಪ್ರಗದ್ ಸಂವಾದ ನಡೆಸುತ್ತಿರುವುದು ಕಂಡು ಬಂದಿದೆ. ವೀಡಿಯೊದಲ್ಲಿ ಜೈಶಂಕರ್ ಮೂರು ರಫೇಲ್ ಜೆಟ್ಗಳನ್ನು ಕಳೆದುಕೊಂಡ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು India Today ಹೇಳಿದೆ.
ʼನಿಮಗೆ ತಿಳಿದಿರುವಂತೆ, ಆ ರಾತ್ರಿ ಪಾಕಿಸ್ತಾನಿಗಳು ನಮ್ಮ ಮೇಲೆ ಭಾರಿ ದಾಳಿ ಮಾಡಿದರು. ನಾವು ತಕ್ಷಣ ಪ್ರತಿಕ್ರಿಯೆಯನ್ನು ನೀಡಿದ್ದೇವೆ. ಮರುದಿನ ಬೆಳಿಗ್ಗೆ, ರುಬಿಯೊ ನನಗೆ ಕರೆ ಮಾಡಿ ಪಾಕಿಸ್ತಾನಿಗಳು ಮಾತನಾಡಲು ಸಿದ್ಧರಿದ್ದಾರೆ ಎಂದರುʼ ಎಂದು ಜೈಶಂಕರ್ ಹೇಳುವುದು ವೀಡಿಯೊದಲ್ಲಿ ಕೇಳಬಹುದು.
ನಾವು ಎರಡು ದಿನಗಳ ಮೊದಲೇ ಮೂರು ರಫೇಲ್ ಯುದ್ಧ ವಿಮಾನಗಳನ್ನು ಕಳೆದುಕೊಂಡಿದ್ದೆವು ಎಂಬುದು AI ಬಳಸಿ ವೀಡಿಯೊವನ್ನು ಮಾರ್ಪಡು ಮಾಡಿರುವುದಾಗಿದೆ. ಈ ವೀಡಿಯೊವನ್ನು ಹೆಚ್ಚಾಗಿ ಪಾಕಿಸ್ತಾನದ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ ಎಂದು India Today ಸತ್ಯ ಶೋಧನೆ ವೇಳೆ ಪತ್ತೆ ಹಚ್ಚಿದೆ.
ಇದಲ್ಲದೆ, MEA ಫ್ಯಾಕ್ಟ್ ಚೆಕ್ ಘಟಕವು ವೈರಲ್ ಆಗಿರುವ ವೀಡಿಯೊವನ್ನು ನಕಲಿ ಎಂದು ಹೇಳಿದೆ.







