ಆರೆಸ್ಸೆಸ್ ಅಥವಾ ನಕಲಿ ಜಾತ್ಯಾತೀತ ರಂಗಕ್ಕೆ ತಲೆ ಬಾಗುವುದಿಲ್ಲ: ಟಿವಿಕೆ ಮುಖ್ಯಸ್ಥ ವಿಜಯ್

PC - TVK Youtube
ಮಧುರೈ: “ನಾವು ಆರೆಸ್ಸೆಸ್ ಗೆ ಅಥವಾ ನಕಲಿ ಜಾತ್ಯಾತೀತ ರಂಗಕ್ಕೆ ತಲೆ ಬಾಗುವುದಿಲ್ಲ” ಎಂದು ನಟ, ರಾಜಕಾರಣಿ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಘೋಷಿಸಿದ್ದಾರೆ.
ಮಧುರೈನಲ್ಲಿ ಆಯೋಜನೆಗೊಂಡಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ಎರಡನೆಯ ರಾಜ್ಯಮಟ್ಟದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ವಿಜಯ್, “ನಮ್ಮ ಪಕ್ಷವು ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆದರೆ, ಯಾರಾದರೂ ಈ ಜನಾಂದೋಲನದಲ್ಲಿ ಭಾಗಿಯಾಗುವುದಾದರೆ, ಅವರು ತಮಿಳಗ ವೆಟ್ರಿ ಕಳಗಂ ಪಕ್ಷ ಅಧಿಕಾರಕ್ಕೆ ಬಂದಾಗ, ಅದರೊಂದಿಗೆ ಅಧಿಕಾರವನ್ನು ಹಂಚಿಕೊಳ್ಳಬಹುದು” ಎಂದು ಹೇಳಿದ್ದಾರೆ.
“ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ರಾಜಕೀಯ ಅಧಿಕಾರದತ್ತ ಕೊಂಡೊಯ್ಯಲು ಪಕ್ಷದಲ್ಲಿ ಮಾಡಲಾಗಿರುವ ವಿವಿಧ ಘಟಕಗಳೇ ಸಾಕು. ನಮಗೆ ಬೇರೆಯವರ ಬೆಂಬಲವಾದರೂ ಯಾಕೆ ಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.
“ನಾವು ಆರೆಸ್ಸೆಸ್ ಅಧೀನರಾಗಲು ಸಾಧ್ಯವಿಲ್ಲ. ಮತ್ತೊಂದೆಡೆ, ತನ್ನನ್ನು ತಾನು ಜಾತ್ಯತೀತ ಎಂದು ಹೇಳಿಕೊಳ್ಳುತ್ತಿರುವ ಪಕ್ಷದೊಂದಿಗೂ ಮೈತ್ರಿ ಸಾಧ್ಯವಿಲ್ಲ. ನಾವು ಯಾವುದಾದರೂ ಮೈತ್ರಿಯ ಭಾಗವಾಗಿ ನಷ್ಟ ಅನುಭವಿಸುವುದು ಬೇಕಿಲ್ಲ. ನಮ್ಮ ಜನಾಂದೋಲನವನ್ನು ಆತ್ಮಗೌರವದೊಂದಿಗೆ ಒಟ್ಟಾಗಿ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಇದೇ ವೇಳೆ, ಅವರು ತಮ್ಮ ಪಕ್ಷದೊಂದಿಗಿನ ಮೈತ್ರಿಗೆ ರಾಜ್ಯದಲ್ಲಿರುವ ಇನ್ನಿತರ ಸಣ್ಣಪುಟ್ಟ ಪಕ್ಷಗಳತ್ತ ಹಸ್ತ ಚಾಚಿದ್ದಾರೆ. ಡಿಎಂಕೆಗೆ ಟಿವಿಕೆ ಮಾತ್ರ ಎದುರಾಳಿ ಎಂದು ಹೇಳುವ ಮೂಲಕ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವ ವದಂತಿಯನ್ನು ವಿಜಯ್ ತಳ್ಳಿ ಹಾಕಿದ್ದಾರೆ.







