ನೂಹ್ ಗಲಭೆಗಳು ಪ್ರದೇಶದ ಮುಸ್ಲಿಮರು ಅನುಭವಿಸುತ್ತಿರುವ ತೀವ್ರ ಕಿರುಕುಳವನ್ನು ಬಿಂಬಿಸುತ್ತಿವೆ: ಸತ್ಯಶೋಧನಾ ತಂಡ
“ಸತ್ಯವನ್ನು ಕಡೆಗಣಿಸಿದ್ದ ಮಾಧ್ಯಮಗಳು”

ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆ್ಯಂಡ್ ಸೆಕ್ಯುಲರಿಸಂ (ಸಿಎಸ್ಎಸ್ಎಸ್) ಜು.೩೧ರಂದು ನೂಹ್ನಲ್ಲಿ ಮತ್ತು ಆ.೧ರಂದು ಸೋಹ್ನಾ ಹಾಗೂ ಗುರುಗ್ರಾಮಗಳಲ್ಲಿ ಸಂಭವಿಸಿದ್ದ ಕೋಮುಗಲಭೆಗಳ ಕುರಿತು ತನ್ನ ಸತ್ಯಶೋಧನಾ ತಂಡದ ವರದಿಯನ್ನು ಬಿಡುಗಡೆಗೊಳಿಸಿದೆ. ಆರು ಜನರನ್ನು ಬಲಿತೆಗೆದುಕೊಂಡಿದ್ದ ಈ ಕೋಮುಗಲಭೆಗಳು ದೇಶದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ,ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡ ದ್ವೇಷ ಭಾಷಣಗಳು ರೂಪಿಸಿರುವ ಮತ್ತು ಪೋಷಿಲ್ಪಟ್ಟಿರುವ ಪರಿಸರ ವ್ಯವಸ್ಥೆಯ ಪರಿಣಾಮವಾಗಿವೆ ಎಂದು ವರದಿಯು ಬೆಟ್ಟು ಮಾಡಿದೆ.
ಸಿಎಸ್ಎಸ್ಎಸ್ ಭಾರತದಲ್ಲಿ ಕೋಮು ಹಿಂಸಾಚಾರದ ಮೇಲೆ ನಿಯಮಿತವಾಗಿ ನಿಗಾ ಇರಿಸುತ್ತದೆ. ನೂಹ್,ಸೊಹ್ನಾ ಮತ್ತು ಗುರುಗ್ರಾಮಗಳಲ್ಲಿ ನಡೆದ ಕೋಮು ಗಲಭೆಗಳ ಅಧ್ಯಯನ ನಡೆಸಿದ ಸತ್ಯಶೋಧನಾ ತಂಡವು ಹೈದರಾಬಾದ್ನ ನ್ಯಾಷನಲ್ ಪೊಲೀಸ್ ಅಕಾಡೆಮಿಯ ಮಾಜಿ ನಿರ್ದೇಶಕ ವಿಕಾಸ ನಾರಾಯಣ ರಾಯ್, ಸಿಎಸ್ಎಸ್ಎಸ್ನ ಕಾರ್ಯಕಾರಿ ಮಂಡಳಿಯ ಸದಸ್ಯೆ ಹಾಗೂ ಹರ್ಯಾಣದ ಮಾಜಿ ಡಿಜಿಪಿ ಡಾ.ಸಂಧ್ಯಾ ಮ್ಹಾತ್ರೆ ಮತ್ತು ಸಿಎಸ್ಎಸ್ಎಸ್ನ ಕಾರ್ಯ ನಿರ್ವಾಹಕ ನಿರ್ದೇಶಕಿ ನೇಹಾ ದಾಭಡೆ ಅವರನ್ನು ಒಳಗೊಂಡಿತ್ತು.
ಈ ಪರಿಸರ ವ್ಯವಸ್ಥೆಯನ್ನು ವಿವರಿಸಿದ ದಾಭಡೆ,ಹರ್ಯಾಣ,ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಹರಡಿಕೊಂಡಿರುವ ಮೇವಾತ್ ಪ್ರದೇಶದಲ್ಲಿ ವಾಸವಾಗಿರುವ,ಕೃಷಿ ಮತ್ತು ಹೈನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮೇವ ಮುಸ್ಲಿಮರು ಸ್ವಘೋಷಿತ ಗೋರಕ್ಷಕರಿಂದ ನಿರಂತರವಾಗಿ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಈ ಗೋರಕ್ಷಕರು ಹರ್ಯಾಣ ಸರಕಾರವು ೨೦೧೫ರಲ್ಲಿ ಗೋ ಉತ್ತೇಜನ ಮತ್ತು ಸಂರಕ್ಷಣಾ ಕಾಯ್ದೆಯನ್ನು ತಂದಾಗಿನಿಂದ ಗೋವುಗಳ ರಕ್ಷಣೆಗಿಂತ ಸುಲಿಗೆಯಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ ಎಂದು ಹೇಳಿದರು.
ಈ ಸ್ವಘೋಷಿತ ಗೋರಕ್ಷಕರು ೨೦೧೪ರಲ್ಲಿ ಬಿಜೆಪಿ ಕೇಂದ್ರದಲ್ಲಿ ಸ್ಪಷ್ಟ ಬಹುಮತದೊಂದಿಗೆ ಗದ್ದುಗೆಗೇರಿದ ಬಳಿಕ ಅಧಿಕಾರದಲ್ಲಿರುವವರ ಮೌನ ಪ್ರೋತ್ಸಾಹದಿಂದಾಗಿ ನಿರ್ಭಯರಾಗಿದ್ದಾರೆ ಎಂದು ಹೇಳಿರುವ ವರದಿಯು, ಸ್ವಘೋಷಿತ ಗೋರಕ್ಷಕರ ಜಾಲಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ಅತಿಯಾದ ಹಫ್ತಾ ಬೇಡಿಕೆಗಳು ಮೇವ ಮುಸ್ಲಿಮ್ ಕೃಷಿಕರನ್ನು ಹೈರಾಣಾಗಿಸಿವೆ. ಕೃಷಿ ಮತ್ತು ಹೈನುಗಾರಿಕೆಯಲ್ಲಿ ಆದಾಯ ಕುಸಿಯುತ್ತಿರುವುದರೊಂದಿಗೆ ತಮಗೆ ಲಭ್ಯವಿರುವ ಏಕೈಕ ಜೀವನೋಪಾಯವನ್ನು ಮುಂದುವರಿಸುವುದು ಈ ಕೃಷಿಕರಿಗೆ ಹೆಚ್ಚುಕಡಿಮೆ ಅಸಾಧ್ಯವನ್ನಾಗಿಸಿದೆ ಎಂದಿದೆ.
ಜುಲೈ ೩೧ರಂದು ನೂಹ್ನಲ್ಲಿ ನಡೆಸಿದ್ದ ಗಲಭೆಗಳು ಈ ಪ್ರದೇಶದಲ್ಲಿನ ಮುಸ್ಲಿಮರನ್ನು ವ್ಯವಸ್ಥಿತವಾಗಿ ಮತ್ತು ಸ್ಪಷ್ಟವಾಗಿ ಗುರಿಯಾಗಿಸಿಕೊಳ್ಳುವುದರೊಂದಿಗೆ ಗಹನವಾದ ಸಂಬಂಧವನ್ನು ಹೊಂದಿವೆ. ಈ ಜನರಿಗೆ ಸರಕಾರದಿಂದ ನ್ಯಾಯ ಸಿಗುವ ನಿರೀಕ್ಷೆಯಂತೂ ಇಲ್ಲವೇ ಇಲ್ಲ. ಮುಸ್ಲಿಮ್ ಯುವಕರನ್ನು ಸುಲಭವಾಗಿ ಅಪಹರಿಸಿ ಹತ್ಯೆ ಮಾಡುತ್ತಿರುವುದು ಪ್ರದೇಶದಲ್ಲಿ ನಿವಾಸಿಗಳನ್ನು ದಿಗ್ಮೂಢರನ್ನಾಗಿಸಿದ್ದು, ನೋವಿನಲ್ಲಿ ಬೇಯುತ್ತಿದ್ದಾರೆ ಎಂದು ವರದಿಯು ತಿಳಿಸಿದೆ.
ಎಪ್ರಿಲ್ ೨೦೧೭ ಮತ್ತು ಫೆಬ್ರವರಿ ೨೦೨೩ರ ನಡುವೆ ಗೋರಕ್ಷಕರಿಂದ ಏಳು ಜನರು ಹತ್ಯೆಯಾಗಿರುವ ಇತರ ಆರು ನಿದರ್ಶನಗಳೂ ಇವೆ ಎಂದು ವರದಿಯು ಹೇಳಿದೆ. ಹತ್ಯೆಯಾದವರಲ್ಲಿ ಮೇವಾತ್ ಪ್ರದೇಶದ ನಿವಾಸಿಗಳಾದ ಪೆಹ್ಲು ಖಾನ್, ರಕ್ಬರ್ ಖಾನ್, ಆಸಿಫ್ ಖಾನ್, ವಾರಿಸ್,ನಾಸಿರ್ ಮತ್ತು ಜುನೈದ್ ಸೇರಿದ್ದಾರೆ. ಗೋರಕ್ಷಕರು ಈ ಎಲ್ಲರನ್ನು ಕ್ರೂರವಾಗಿ ಹತ್ಯೆ ಮಾಡಿದ್ದರು. ನಾಸಿರ್ ಮತ್ತು ಜುನೈದ್ರನ್ನು ಭರತಪುರದಿಂದ ಅಪಹರಿಸಿ ಸಾಯುವಂತೆ ಥಳಿಸಿ ಅವರ ಕಾರಿನಲ್ಲಿಯೇ ಸುಟ್ಟು ಹಾಕಲಾಗಿತ್ತು.
೨೦೨೩,ಫೆ.೧೬ರಂದು ನಾಸಿರ್ ಮತ್ತು ಜುನೈದ್ ಅಪಹರಣ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿ ಮೋನು ಮನೇಸರ್ ಜು.೩೧ರಂದು ನೂಹ್ ಗಲಭೆಗಳು ಸಂಭವಿಸಿದಾಗ ಮುಕ್ತವಾಗಿ ಓಡಾಡಿಕೊಂಡಿದ್ದ. ಮನೇಸರ್ ವಾರಿಸ್ ಹತ್ಯೆಯ ಹಿಂದೆಯೂ ಇದ್ದ ಎಂದು ಆತನ ಕುಟುಂಬವು ಆರೋಪಿಸಿದೆ.
ಇತರ ಹಲವಾರು ಸಂದರ್ಭಗಳಲ್ಲಿ ಈ ಸ್ವಘೋಷಿತ ಗೋರಕ್ಷಕರು ಕಾನೂನಿನ ಯಾವುದೇ ಭೀತಿಯಿಲ್ಲದೆ ತಮ್ಮ ಕ್ರೌರ್ಯದ ವೀಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ತಮ್ಮ ಸುಲಿಗೆ ದಂಧೆಯನ್ನು ನಿರಾತಂಕವಾಗಿ ನಡೆಸಲು ಅಲ್ಪಸಂಖ್ಯಾತ ಸಮುದಾಯದಲ್ಲಿ ಭೀತಿಯನ್ನು ಹುಟ್ಟಿಸಲು ಈ ಭಯಾನಕ ವೀಡಿಯೊಗಳನ್ನು ಅಪ್ಲೋಡ್ ಮಾಡಲಾಗಿತ್ತು. ಇವೆಲ್ಲವೂ ಅಲ್ಪಸಂಖ್ಯಾತ ಸಮುದಾಯದಲ್ಲಿ ಸರಕಾರ ಮತ್ತು ಪೊಲೀಸರ ವಿರುದ್ಧ ಸಿಟ್ಟು ಹೆಚ್ಚಲು ಕಾರಣವಾಗಿದ್ದವು ಮತ್ತು ಅವರಲ್ಲಿ ಅಸಹಾಯಕತೆಯ ಭಾವನೆಯನ್ನು ಮೂಡಿಸಿದ್ದವು ಎಂದು ವರದಿಯು ಹೇಳಿದೆ.
ಮೇವ ಮುಸ್ಲಿಮ್ ಸಮುದಾಯವು ಮುಘಲರ ವಿರುದ್ಧ ಹೋರಾಡಿತ್ತು ಮತ್ತು ದೇಶದ ವಿಭಜನೆಯನ್ನು ವಿರೋಧಿಸಿತ್ತು. ಮಹಾತ್ಮಾ ಗಾಂಧಿಯವರು ಮೇವಾತ್ನ್ನು ‘ಭಾರತದ ಬೆನ್ನುಮೂಳೆ ’ ಎಂದು ಬಣ್ಣಿಸಿದ್ದರು ಎಂದು ದಾಭಡೆ ಹೇಳಿದರು.
ಮೇವ ರೈತನೋರ್ವನ ೫೬ ಗೋವುಗಳನ್ನು ಅಪಹರಿಸಿದ್ದ ಆರೋಪಿ ಬಿಟ್ಟು ಬಜರಂಗಿ ಮತ್ತು ಮನೇಸರ್ ತಾವು ಜು.೩೧ರಂದು ಬೃಜ್ಮಂಡಲ ಜಲಾಭಿಷೇಕ ಯಾತ್ರೆಯೊಂದಿಗೆ ನೂಹ್ಗೆ ಬರುತ್ತಿರುವುದಾಗಿ ಪ್ರಕಟಿಸಿ ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದು ಮುಸ್ಲಿಮರಲ್ಲಿಯ ಹತಾಶೆಯನ್ನು ಇನ್ನಷ್ಟು ಉಲ್ಬಣಗೊಳಿಸಿತ್ತು. ತಮ್ಮನ್ನು ಬರಮಾಡಿಕೊಳ್ಳುವಂತೆ ಅವರಿಬ್ಬರೂ ಮುಸ್ಲಿಮ್ ‘ಪುರುಷತ್ವ’ಕ್ಕೆ ಸವಾಲೊಡ್ಡಿದ್ದರು.
ಅವರ ಈ ಬಲೆಗೆ ಕೆಲವು ಯುವಕರು ಬಿದ್ದಿದ್ದರು ಮತ್ತು ಅವರಿಬ್ಬರ ಪೈಕಿ ಒಬ್ಬರಾದರೂ ಕಂಡರೆ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದರು. ಈ ಯುವಕರು ಬಿಳಿಬಣ್ಣದ ಕಾರೊಂದರಲ್ಲಿ ಮನೇಸರ್ ಇದ್ದಾನೆ ಎಂದು ನಂಬಿದ್ದರು. ಚಾಲಕ ಕಾರನ್ನು ಹಿಂದಕ್ಕೆ ತೆಗೆದುಕೊಂಡು ವೇಗವಾಗಿ ಹೋಗುತ್ತಿದ್ದಂತೆ ಅದು ಮುಸ್ಲಿಮ್ ಬಾಲಕನೋರ್ವನಿಗೆ ಢಿಕ್ಕಿ ಹೊಡೆದಿತ್ತು. ಕಾರನ್ನು ಬೆನ್ನಟ್ಟಿ ನಿಲ್ಲಿಸಿದ್ದ ಯುವಕರು ಬಜರಂಗಿಯನ್ನು ಹೊರಗೆಳೆದಿದ್ದರು. ಇದು ಯುವಕರ ಗುಂಪೊಂದರಿಂದ ದಾಳಿಗೆ ಮತ್ತು ನಂತರದ ಪೊಲೀಸ್ ಗೋಲಿಬಾರಕ್ಕೆ ಕಾರಣವಾಗಿತ್ತು. ಹಿಂಸಾಚಾರದಲ್ಲಿ ಇಬ್ಬರು ಹೋಮ್ಗಾರ್ಡ್ಗಳು ಮತ್ತು ಇತರ ಮೂವರು ಕೊಲ್ಲಲ್ಪಟ್ಟಿದ್ದರು ಎಂದು ವರದಿಯು ಹೇಳಿದೆ.
ಮುಸ್ಲಿಮ್ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಲಾಗಿತ್ತು, ಮೆರವಣಿಗೆಯಲ್ಲಿದ್ದ ಕೆಲವರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ವರದಿಯು ಹೇಳಿದೆ.
ಮೆರವಣಿಗೆಯಲ್ಲಿದ್ದವರು ಮುಸ್ಲಿಮರ ಆಸ್ತಿಗಳು ಮತ್ತು ಅಂಗಡಿಗಳನ್ನೂ ನಾಶಗೊಳಿಸಿದ್ದರು. ಹೆಚ್ಚಿನ ಮಾಧ್ಯಮಗಳು ಈ ಸತ್ಯವನ್ನು ಕಡೆಗಣಿಸಿದ್ದವು ಎಂದು ವರದಿಯು ಬೆಟ್ಟು ಮಾಡಿದೆ.
ಪೊಲೀಸರು ದೃಢಸಂಕಲ್ಪವನ್ನು ಮಾಡಿದ್ದರೆ ಜು.೩೧ರಂದು ಗಲಭೆಗಳನ್ನು ತಡೆಯಲು ಸಾಧ್ಯವಿತ್ತು,ಆದರೆ ಅಂದು ಪೊಲಿಸರ ಉಪಸ್ಥಿತಿ ವಿರಳವಾಗಿತ್ತು ಮತ್ತು ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು ಎಂದು ವರದಿಯು ಹೇಳಿದೆ.
ಗಲಭೆಕೋರರಿಗೆ ತಕ್ಕ ಪಾಠವನ್ನು ಕಲಿಸುವ ಹರ್ಯಾಣದ ಮುಖ್ಯಮಂತ್ರಿ ಮತ್ತು ಗೃಹಸಚಿವರ ಬಹಿರಂಗ ಹೇಳಿಕೆಗಳಿಂದ ಉತ್ತೇಜಿತರಾಗಿದ್ದ ಪೊಲೀಸರು ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಿದ್ದರು ಎಂದು ಹೇಳಿರುವ ವರದಿಯು,ನ್ಯಾಯಾಲಯದ ಮೇಲ್ವಿಚಾರಣೆಯಡಿ ವಿಶೇಷ ತನಿಖಾ ತಂಡದಿಂದ ಹಿಂಸಾಚಾರದ ಬಗ್ಗೆ ತನಿಖೆಗೆ ಹಾಗೂ ಎಲ್ಲ ಗಲಭೆಕೋರರನ್ನು,ಅವರ ಧರ್ಮವನ್ನು ಪರಿಗಣಿಸದೆ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದೆ. ಬಂಧಿತ ಯುವಕರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೆ ಅವರನ್ನು ಬಿಡುಗಡೆಗೊಳಿಸುವಂತೆಯೂ ಅದು ಒತ್ತಾಯಿಸಿದೆ.
ಕೃಪೆ: thewire.in







