Noida: ಚಲಿಸುತ್ತಿದ್ದ ಬಸ್ ನಲ್ಲಿ ದಿಢೀರ್ ಬೆಂಕಿ; ಕನಿಷ್ಠ ಒಂಭತ್ತು ಮಂದಿ ಮೃತ್ಯು

Photo: screengrab/x.com/qpzmnews
ಲಕ್ನೋ: ಯಮುನಾ ಎಕ್ಸ್ಪ್ರೆಸ್ ವೇಯಲ್ಲಿ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಗುರುವಾರ ಬೆಳಿಗ್ಗೆ ಚಲಿಸುತ್ತಿದ್ದ ಪ್ರಯಾಣಿಕರ ಬಸ್ ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಬಸ್ ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂನ್ನಲಾಗಿದ್ದು, ಬೆಂಕಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತೀವ್ರ ಹೊಗೆಯಿಂದಾಗಿ ಹಲವರು ಹೊರಬರಲಾಗದೆ ಬಸ್ನೊಳಗೇ ಸಿಲುಕಿ ಪ್ರಾಣ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬದುಕುಳಿದ ಪ್ರಯಾಣಿಕರೊಬ್ಬರು, ಘಟನೆ ಸಂಭವಿಸಿದಾಗ ಹಲವು ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಯಾರೋ ಬಾಗಿಲು ಬಡಿದು ಎಚ್ಚರಿಸಿದಾಗ ಬಸ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಯಿತು ಎಂದು ತಿಳಿಸಿದ್ದಾರೆ.
“ಒಬ್ಬರನ್ನೊಬ್ಬರು ದೂಡಿಕೊಂಡು ಹೊರಬರಲು ಪ್ರಯತ್ನಿಸುತ್ತಿದ್ದರು. ತಳ್ಳಾಟದ ನಡುವೆ ನೂಕಿಕೊಂಡು ಹೊರಬರಲು ಸಾಧ್ಯವಾದ ಕೆಲವೇ ಮಂದಿ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ,” ಎಂದು ಪ್ರಯಾಣಿಕರೊಬ್ಬರು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ
ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗಾಯಾಳುಗಳಿಗೆ ಸೂಕ್ತ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ನಿಖರ ವಿವರಗಳು ಮತ್ತು ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.






