ಪಂಜಾಬ್ ನಲ್ಲಿ ವಿಮೆ ಹಣಕ್ಕಾಗಿ ಅನಿವಾಸಿ ಭಾರತೀಯ ಮಹಿಳೆಯ ಉಸಿರುಗಟ್ಟಿಸಿ ಹತ್ಯೆ: ಫ್ರೀಝರ್ ನಲ್ಲಿ ಮೃತದೇಹ ಪತ್ತೆ
ರಾಜ್ ದೀಪ್ ಕೌರ್ | Photo: tribuneindia.com
ಕಪುರ್ತಲಾ (ಪಂಜಾಬ್): ಅಮೆರಿಕಾ ಪ್ರಜೆಯಾಗಿದ್ದ ರಾಜ್ ದೀಪ್ ಕೌರ್ ಎಂಬ 32 ವರ್ಷದ ಅನಿವಾಸಿ ಭಾರತೀಯ ಮಹಿಳೆಯನ್ನು ಆಕೆಯ ಅತ್ತೆ-ಮಾವ ಉಸಿರುಗಟ್ಟಿಸಿ ಹತ್ಯೆಗೈದಿರುವ ಘಟನೆ ಕಪುರ್ತಲಾದ ನ್ಯಾನೊ ಮಲಿಯನ್ ಗ್ರಾಮದಲ್ಲಿ ನಡೆದಿದೆ. ಆಕೆ ಮಾಡಿಸಿದ್ದ ಭಾರಿ ಮೊತ್ತದ ಜೀವ ವಿಮೆ ಮೊತ್ತವನ್ನು ಲಪಟಾಯಿಸಲು ಈ ಹತ್ಯೆ ನಡೆಸಿರಬಹುದು ಎಂದು ಶಂಕಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯು ಜನವರಿ 19ರಂದು ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಐದು ವರ್ಷದ ಬಾಲಕನ ತಾಯಿಯಾದ ರಾಜ್ ದೀಪ್ ಜನವರಿ 12ರಂದು ಕಪುರ್ತಲಾಗೆ ಆಗಮಿಸಿದ್ದರು. ಸಂಬಂಧಿಕರೊಬ್ಬರ ವಿವಾಹದ ನೆಪವೊಡ್ಡಿ, ಆಕೆಯನ್ನು ಕಪುರ್ತಲಾಗೆ ಕರೆದು ತರಲಾಗಿತ್ತು ಎಂದು The Tribune ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಜ್ ದೀಪ್ ಅವರ ಪತಿ ಮಂಜಿಂದರ್ ಸಿಂಗ್ ಅಮೆರಿಕಾದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದು, ತನಗೆ ಹಸಿರು ಕಾರ್ಡ್ ದೊರೆಯಬಹುದು ಎಂಬ ಆಶಾವಾದದಲ್ಲಿದ್ದಾರೆ ಎಂದು ಹೇಳಲಾಗಿದೆ.
ರಾಜ್ ದೀಪ್ ಅವರ ಅತ್ತೆಮಾವಂದಿರಾದ ದಲ್ಜಿತ್ ಕೌರ್ ಹಾಗೂ ಜಗದೇವ್ ಸಿಂಗ್ ಈ ಅಪರಾಧ ಕೃತ್ಯವನ್ನು ಎಸಗಿದ್ದಾರೆ ಎಂದು ಶಂಕಿಸಲಾಗಿದ್ದು, ಅವರನ್ನು ಸುಲ್ತಾನ್ ಪುರ್ ಲೋಧಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಅಮೆರಿಕಾದಲ್ಲೇ ಇರುವ ರಾಜ್ ದೀಪ್ ಅವರ ಪತಿ ಮಂಜಿಂದರ್ ಸಿಂಗ್ ವಿರುದ್ಧವೂ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ರಾಜ್ ದೀಪ್ ಅವರ ಅತ್ತೆಮಾವಂದಿರು ತಮ್ಮ ಸೊಸೆಯ ಸಾವಿನ ಕುರಿತು ಸುಲ್ತಾನ್ ಪುರ್ ಲೋಧಿ ಪೊಲೀಸರಿಗೆ ದೂರು ನೀಡುವುದಕ್ಕೆ ಎರಡು ದಿನ ಮುನ್ನ ಆಕೆಯ ಮೃತದೇಹವನ್ನು ಸಿಧ್ವಾ ದೋನಾ ಗ್ರಾಮದಲ್ಲಿ ಫ್ರೀಝರ್ ನಲ್ಲಿ ಇಟ್ಟಿದ್ದ ಸಂಗತಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.
ಶನಿವಾರ ಈ ಸಂಬಂಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿರುವ ಸುಲ್ತಾನ್ ಪುರ್ ಲೋಧಿ ಠಾಣೆ ಪೊಲಿಸರು, ತನಿಖೆ ಕೈಗೊಂಡಿದ್ದಾರೆ.