ಮಹಾರಾಷ್ಟ್ರ | ಏಕನಾಥ್ ಶಿಂದೆ, ಅಜಿತ್ ಪವಾರ್ ಉತ್ತಮ ಮಾತುಗಾರರಲ್ಲ: ಸಿಎಂ ಫಡ್ನವಿಸ್ ಹೇಳಿಕೆ

Credit: PTI Photo
ಮುಂಬೈ: ಬಿಜೆಪಿ ನೇತೃತ್ವದ ಮಹಾಯುತಿ ಸರಕಾರದಲ್ಲಿನ ಅಂಗಪಕ್ಷಗಳಾದ ಶಿವಸೇನೆ (ಶಿಂದೆ ಬಣ) ಹಾಗೂ ಎನ್ಸಿಪಿ (ಅಜಿತ್ ಪವಾರ್ ಬಣ) ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಬಯಲಿಗೆ ಬಂದಿದ್ದು, “ಸಂವಹನದಲ್ಲಿ ಅವರಿಬ್ಬರೂ ಉತ್ತಮವಾಗಿಲ್ಲ” ಎಂದು ಹೇಳುವ ಮೂಲಕ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಬುಧವಾರ ಮಾಧ್ಯಮ ಗುಂಪಿನ ನಡುವಿನ ನಡೆದ ಸಂವಾದದ ವೇಳೆ ದೇವೇಂದ್ರ ಫಡ್ನವಿಸ್ ಈ ಲಘು ಧಾಟಿಯ ಹೇಳಿಕೆ ನೀಡಿದ್ದಾರಾದರೂ, ಅವರ ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
“ಸಂವಹನದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳ ಪೈಕಿ ಯಾರು ಉತ್ತಮ?” ಎಂಬ ವರದಿಗಾರರೊಬ್ಬರ ಪ್ರಶ್ನೆಗೆ ಉತ್ತರಿಸಿದ ದೇವೇಂದ್ರ ಫಡ್ನವಿಸ್, “ನಾನು ನಿಮಗೆ ಮುಕ್ತವಾಗಿ ಹೇಳಲು ಬಯಸುತ್ತೇನೆ. ಅದಕ್ಕಾಗಿ ಅವರು ನನ್ನನ್ನು ಕ್ಷಮಿಸಲಿ. ಇಬ್ಬರೂ ಸಂವಹನದಲ್ಲಿ ಉತ್ತಮವಾಗಿಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದರು.
ಈ ಹೇಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ ತರಾಟೆಗೆ ತೆಗೆದುಕೊಂಡಿದೆ.
“ಸರಕಾರದೊಳಗೇ ಸಂವಹನವಿಲ್ಲ. ಸರಕಾರ ಯಾವುದೇ ಮಾತುಕತೆಯಿಲ್ಲದೆ ನಡೆಯುತ್ತಿದೆ. ಮೂವರಲ್ಲೂ ಸ್ವಾರ್ಥ ಮಾತ್ರವಿದೆ. ಅದೇ ಸ್ಪಷ್ಟವಾಗಿ ಕಾಣುತ್ತಿರುವುದು” ಎಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ ವಿಜಯ್ ವಡೆಟ್ಟಿವರ್ ವಾಗ್ದಾಳಿ ನಡೆಸಿದ್ದಾರೆ.
ಶರದ್ ಪವಾರ್ ಅವರ ನಿಕಟವರ್ತಿ ಹಾಗೂ ಎನ್ಸಿಪಿಯ ಎಂಎಲ್ಸಿ ಅಮೋಲ್ ಮಿತ್ಕರಿ ಕೂಡಾ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನೀವು ರಾಜ್ಯದ ಒಳ್ಳೆಯ ನಾಯಕರಾಗಿದ್ದು, ಅಜಿತ್ ದಾದಾ ಹಾಗೂ ಶಿಂದೆ ಸಾಹೇಬ್ ಈ ತಂಡದ ಮುಖ್ಯರ ಸ್ತಂಭಗಳಾಗಿದ್ದಾರೆ. ಅವರಿಬ್ಬರಿಗೂ ಸಾರ್ವಜನಿಕರು ಹಾಗೂ ಸರಕಾರದೊಂದಿಗೆ ಉತ್ತಮ ಸಂವಹನವಿದೆ. ಇಂತಹ ಸಾರ್ವಜನಿಕ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸುವ ಬದಲು, ನಾಲ್ಕು ಗೋಡೆಗಳ ಮಧ್ಯೆ ಉತ್ತಮ ಸಂವಹನವಿರಬೇಕು ಎಂದು ರಾಜ್ಯ ಬಯಸುತ್ತದೆ” ಎಂದು ಕಿವಿಮಾತು ಹೇಳಿದ್ದಾರೆ.
ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾರ್ಯತಂತ್ರಗಳ ಕುರಿತು ಫಡ್ನವಿಸ್-ಶಿಂದೆ-ಪವಾರ್ ತ್ರಿವಳಿಗಳೊಂದಿಗೆ ಚರ್ಚಿಸಲು ಮುಂಬೈಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಿ ಮರಳಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.







