"ಸರಕಾರ ಹೆಚ್ಚಿನದನ್ನೇನೂ ಮಾಡಲು ಸಾಧ್ಯವಿಲ್ಲ": ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಕುರಿತು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ : ಯೆಮೆನ್‌ನಲ್ಲಿ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲುಶಿಕ್ಷೆ ತಡೆಯಲು ಭಾರತ ಹೆಚ್ಚಿನದನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ವಿಷಯದಲ್ಲಿ ಭಾರತವು ಹೋಗಲು ಸಾಧ್ಯವಿರುವ ದೂರ ಇಷ್ಟೇ ಮತ್ತು ಸರಕಾರ ಈಗಾಗಲೇ ಆ ಮಿತಿಯನ್ನು ತಲುಪಿದೆ.
ಸರಕಾರ ಹೆಚ್ಚಿನದನ್ನೇನೂ ಮಾಡಲು ಸಾಧ್ಯವಿಲ್ಲ. ಯೆಮೆನ್ ರಾಜತಾಂತ್ರಿಕವಾಗಿ ಗುರುತಿಸಲ್ಪಟ್ಟಿಲ್ಲ. ಬ್ಲಡ್ ಮನಿ (Blood money) ವಿಚಾರ ಖಾಸಗಿ ಮಾತುಕತೆಯಾಗಿದೆ. ಸರಕಾರ ಖಾಸಗಿ ಮಾರ್ಗಗಳ ಮೂಲಕ ನಿಮಿಷಾ ಅವರನ್ನು ರಕ್ಷಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ ಎಂದು ಸರಕಾರಿ ವಕೀಲ ಎಜಿ ವೆಂಕಟರಮಣಿ ಹೇಳಿದ್ದಾರೆ ಎಂದು ʼಲೈವ್ ಲಾʼ ವರದಿ ಮಾಡಿದೆ.
ʼಭಾರತ ಸರಕಾರ ಯಾವ ಹಂತಕ್ಕೆ ಹೋಗಬಹುದು ಎಂಬುದಕ್ಕೆ ಒಂದು ಮಿತಿಯಿದೆ. ನಾವು ಅದನ್ನು ತಲುಪಿದ್ದೇವೆ. ಯೆಮೆನ್ ಪ್ರಪಂಚದ ಯಾವುದೇ ದೇಶದಂತೆ ಅಲ್ಲ. ನಾವು ಸಾರ್ವಜನಿಕವಾಗಿ ಮಾತನಾಡುವ ಮೂಲಕ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಲು ಬಯಸಲಿಲ್ಲ. ನಾವು ಖಾಸಗಿ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದೇವೆʼ ಎಂದು ಸರಕಾರದ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ತಿಳಿಸಿದರು.





