ನರೇಗಾ ಯೋಜನೆಯು ಆಧಾರ್-ಆಧರಿತ ವೇತನ ಪಾವತಿಯೊಂದಿಗೆ ತ್ವರಿತ ಮತ್ತು ಸುಗಮಗೊಂಡಿದೆ ಎಂಬ ಸರಕಾರದ ಹೇಳಿಕೆಗಳು ಅಪ್ಪಟ ಸುಳ್ಳು: ತನಿಖಾ ವರದಿ

PC : thewire.in
ಹೊಸದಿಲ್ಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ನರೇಗಾ) ಯೋಜನೆಯು ಆಧಾರ್-ಆಧರಿತ ವೇತನ ಪಾವತಿಯೊಂದಿಗೆ ತ್ವರಿತ ಮತ್ತು ಸುಗಮಗೊಂಡಿದೆ ಎಂಬ ಸರಕಾರದ ಹೇಳಿಕೆಗಳು ಅಪ್ಪಟ ಸುಳ್ಳು ಎನ್ನುವುದನ್ನು ಇತ್ತೀಚಿಗೆ ಇಂಡಿಯನ್ ಜರ್ನಲ್ ಆಫ್ ಲೇಬರ್ ಇಕನಾಮಿಕ್ಸ್ನಲ್ಲಿ ಪ್ರಕಟಗೊಂಡಿರುವ ಸಂಶೋಧನಾ ಪ್ರಬಂಧವು ಬಹಿರಂಗಗೊಳಿಸಿದೆ. ಬೆಂಗಳೂರಿನ ಅಝೀಂ ಪ್ರೇಮಜಿ ವಿವಿಯ ಪ್ರಾಧ್ಯಾಪಕ ರಾಜೇಂದ್ರನ್ ನಾರಾಯಣನ್ ಸೇರಿದಂತೆ ತಜ್ಞರ ತಂಡವು ಈ ಪ್ರಬಂಧವನ್ನು ಬರೆದಿದೆ.
ಇತ್ತೀಚಿನವರೆಗೂ ನರೇಗಾ ಯೋಜನೆಯಡಿ ಕಾರ್ಮಿಕರು ತಮ್ಮ ವೇತನಗಳನ್ನು ಪಡೆಯಲು ನೆಫ್ಟ್ನಂತೆ ಸಾಂಪ್ರದಾಯಿಕ ಖಾತೆ-ಆಧಾರಿತ ಮತ್ತು ಆಧಾರ್-ಆಧರಿತ (ಎಬಿಪಿಎಸ್) ಪಾವತಿ ವ್ಯವಸ್ಥೆಗಳ ಪೈಕಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ ಕೇಂದ್ರ ಸರಕಾರವು ಹಲವಾರು ಗಡುವು ವಿಸ್ತರಣೆಗಳ ಬಳಿಕ 2024,ಜ.1ರಿಂದ ವೇತನ ಪಾವತಿಗೆ ಎಬಿಪಿಎಸ್ನ್ನು ಕಡ್ಡಾಯಗೊಳಿಸಿದೆ.
ಅನುಷ್ಠಾನದ ಪ್ರಮಾಣವನ್ನು ಪರಿಗಣಿಸಿದರೆ ನರೇಗಾ ಯೋಜನೆಯು ಅನೇಕ ಡಿಜಿಟಲ್ ತಂತ್ರಜ್ಞಾನಗಳನ್ನು ಪರೀಕ್ಷಿಸುವ ಪ್ರಯೋಗಾಲಯ ಆಗಿಬಿಟ್ಟಿದೆ. ಮುಂದಿನ ವರ್ಷದ ಕಾಮಗಾರಿಗಳ ಯೋಜನೆಯಿಂದ ಹಿಡಿದು ಕಾರ್ಮಿಕರಿಗೆ ವೇತನ ಪಾವತಿಯವರೆಗೆ ಪ್ರತಿಯೊಂದೂ ಡಿಜಿಟಲೀಕರಣಗೊಂಡಿದೆ. ನರೇಗಾ ಯೋಜನೆಯಲ್ಲಿನ ಎರಡು ಡಿಜಿಟಲ್ ಹಸ್ತಕ್ಷೇಪಗಳು ಕಡಿಮೆ ಹೊಣೆಗಾರಿಕೆಯೊಂದಿಗೆ ಅಥವಾ ಯಾವುದೇ ಹೊಣೆಗಾರಿಕೆಯಿಲ್ಲದೆ ಸಾರ್ವಜನಿಕ ಮೌಲ್ಯಗಳೊಂದಿಗೆ ಹೇಗೆ ರಾಜಿ ಮಾಡಿಕೊಂಡಿವೆ ಎನ್ನುವುದನ್ನು ಪ್ರಬಂಧವು ಬೆಟ್ಟು ಮಾಡಿದೆ.
ಇವೆರಡೂ ವ್ಯವಸ್ಥೆಗಳ ಅಧ್ಯಯನ ನಡೆಸಿರುವ ತಜ್ಞರ ತಂಡವು ನರೇಗಾ ಯೋಜನೆಗೆ ಸಾಕಷ್ಟು ಬಜೆಟ್ ಹಂಚಿಕೆಯ ಕೊರತೆಯು ವೇತನ ಪಾವತಿಗಳ ವಿಳಂಬಕ್ಕೆ ಕಾರಣವಾಗಿದ್ದು,ತಂತ್ರಜ್ಞಾನಗಳ ಬಳಕೆಯು ವಿಳಂಬವನ್ನು ನಿವಾರಿಸುವಲ್ಲಿ ವಿಫಲಗೊಂಡಿದೆ ಎನ್ನುವುದನ್ನು ಕಂಡುಕೊಂಡಿದೆ.
ವೇತನ ಪಾವತಿ ನಿರಾಕರಣೆಗಳು ಖಾತೆ ಆಧಾರಿತ ಮತ್ತು ಎಬಿಪಿಎಸ್ ಈ ಎರಡೂ ವ್ಯವಸ್ಥೆಗಳಲ್ಲಿ ಉದ್ಭವಿಸಬಹುದು. ಆದರೆ ಸರಕಾರದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಇವರೆಡೂ ಪಾವತಿ ವ್ಯವಸ್ಥೆಗಳಲ್ಲಿ ವೇತನ ನಿರಾಕರಣೆ ದರಗಳಲ್ಲಿ ಸಂಖ್ಯಾಶಾಸ್ತ್ರೀಯವಾಗಿ ಮಹತ್ವದ ವ್ಯತ್ಯಾಸಗಳು ಕಂಡು ಬಂದಿಲ್ಲ.
ಖಾತೆ ಆಧಾರಿತ ವ್ಯವಸ್ಥೆಯಲ್ಲಿ ವೇತನ ನಿರಾಕರಣೆ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು ಮತ್ತು ಇದನ್ನು ಪಂಚಾಯತ್ ಅಥವಾ ಬ್ಲಾಕ್ ಮಟ್ಟದಲ್ಲಿ ಮಾಡಬಹುದು,ಆದರೆ ಎಬಿಪಿಎಸ್ ವ್ಯವಸ್ಥೆಯಲ್ಲಿನ ವೇತನ ನಿರಾಕರಣೆಯನ್ನು ಅದರ ಅಪಾರದರ್ಶಕತೆ ಮತ್ತು ಕೇಂದ್ರೀಕೃತ ಸ್ವರೂಪದಿಂದಾಗಿ ಪರಿಹರಿಸುವುದು ಕಷ್ಟ ಎನ್ನುವುದನ್ನು ತಜ್ಞರ ತಂಡವು ತನ್ನ ತಳಮಟ್ಟದ ಅನುಭವಗಳಿಂದ ಕಂಡುಕೊಂಡಿದೆ.
ಡಿಜಿಟಲ್ ತಂತ್ರಜ್ಞಾನವು ಸಾಮಾಜಿಕ ನೀತಿಗಳನ್ನು ಅನುಷ್ಠಾನಿಸಲು ಒಂದು ಸಾಧನವಾಗಿದೆ,ಅದು ಏಕೈಕ ಇಂಜಿನ್ ಆಗಿರಬಾರದು. ವಿಭಿನ್ನ ಸಮಸ್ಯೆಗಳು ಹೊರಹೊಮ್ಮುತ್ತಿದ್ದಂತೆ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸರಕಾರವು ‘ತೇಪೆ ಹಚ್ಚುವ’ ಸುಲಭ ವಿಧಾನವನ್ನು ಅನುಸರಿಸುತ್ತದೆ. ಯೋಜನಾ ಹಂತದಲ್ಲಿ ಈ ಬದಲಾವಣೆಗಳು ಸರಳವಾಗಿ ಕಂಡು ಬರಬಹುದು,ಆದರೆ ತಳ ಮಟ್ಟದಲ್ಲಿ ಈ ಬದಲಾವಣೆಗಳನ್ನು ಪರಿಚಯಿಸುವುದು ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ದುಬಾರಿಯಾಗಬಹುದು. ತಂತ್ರಜ್ಞಾನ ಆಯ್ಕೆಗಳು ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ಹೊಂದಿದ್ದು,ತಾಂತ್ರಿಕ ಪರಿಹಾರಗಳ ಸಾಧಕ-ಬಾಧಕಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಮತ್ತು ಪರಿಹರಿಸದೆ ಅವುಗಳನ್ನು ಹೇರುವುದು ಅನೈತಿಕವಾಗುತ್ತದೆ ಎಂದು ವರದಿಯು ಹೇಳಿದೆ.
ಕೃಪೆ: thewire.in







