70 ಗಂಟೆಗಳ ದುಡಿಮೆಯ ನನ್ನ ಸಲಹೆಗೆ ಅನಿವಾಸಿ ಭಾರತೀಯರು ಸಹಮತ ವ್ಯಕ್ತಪಡಿಸಿದ್ದಾರೆ: ನಾರಾಯಣ ಮೂರ್ತಿ
"ಹೆಚ್ಚು ಪರಿಶ್ರಮದಿಂದ ದುಡಿಯಲು ಹಿಂಜರಿಯುವ ಭಾರತೀಯರ ವರ್ತನೆ ದುರದೃಷ್ಟಕರ"
ನಾರಾಯಣ ಮೂರ್ತಿ | Photo: NDTV
ಹೊಸದಿಲ್ಲಿ: ಭಾರತದ ಯುವಕರು ವಾರಕ್ಕೆ 70 ಗಂಟೆಗಳ ದುಡಿಯಬೇಕು ಎಂಬ ತಮ್ಮ ಸಲಹೆಯನ್ನು ಮತ್ತೊಮ್ಮೆ ಪುನರುಚ್ಚರಿಸಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ದೇಶದ ವಿದ್ಯಾವಂತ ಜನಸಂಖ್ಯೆಯು ‘ಕಠಿಣ ಪರಿಶ್ರಮ’ ಪಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ಕೊಂಚ ದುರದೃಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
CNBC-TV18 ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ನಿಲುವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ನಾರಾಯಣ ಮೂರ್ತಿ, “ರೈತರು ಹಾಗೂ ಕಾರ್ಖಾನೆಗಳಲ್ಲಿನ ಕಾರ್ಮಿಕರು ತುಂಬಾ ಕಠಿಣ ದುಡಿಮೆ ಮಾಡುತ್ತಾರೆ. ಭಾರತದಲ್ಲಿ ಕಠಿಣ ದುಡಿಮೆ ಸಾಮಾನ್ಯವಾಗಿದ್ದು, ಬಹುತೇಕರು ದೈಹಿಕ ಪರಿಶ್ರಮ ಬೇಕಾಗುವ ವೃತ್ತಿಯನ್ನು ಅವಲಂಬಿಸಿದ್ದಾರೆ” ಎಂದು ಹೇಳಿದ್ದಾರೆ. ಹೀಗಾಗಿ, ಶಿಕ್ಷಣ ಪಡೆದಿರುವ ನಮ್ಮಂಥವರು ಈ ಶಿಕ್ಷಣಕ್ಕೆ ಎಲ್ಲ ಸಬ್ಸಿಡಿ ನೀಡಿರುವ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸಬೇಕಿದೆ. ಅದರ ಬದಲು ಹೆಚ್ಚು ಪರಿಶ್ರಮದಿಂದ ದುಡಿಯಲು ಹಿಂಜರಿಯುವ ಭಾರತೀಯರ ವರ್ತನೆ ಕೊಂಚ ದುರದೃಷ್ಟಕರವಾಗಿದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾದರೂ, ಒಳ್ಳೆಯ ಜನರು ಹಾಗೂ ಅನಿವಾಸಿ ಭಾರತೀಯರು ನನ್ನ ಸಲಹೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ನಾರಾಯಣ ಮೂರ್ತಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ನಮ್ಮ ಕುಟುಂಬಕ್ಕೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವುದು ಸಾಮಾನ್ಯವಾಗಿದ್ದು, ನಾರಾಯಣ ಮೂರ್ತಿ ಕೆಲವೊಮ್ಮೆ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು ಎಂದು ತಮ್ಮ ಪತಿಯ ನಿಲುವನ್ನು ಸಮಾಜ ಸೇವಕಿ ಹಾಗೂ ಲೇಖಕಿ ಸುಧಾಮೂರ್ತಿ ಸಮರ್ಥಿಸಿಕೊಂಡಿದ್ದಾರೆ.