ಉತ್ತರ ಪ್ರದೇಶದಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ; ಗುಪ್ತಾಂಗಕ್ಕೆ ಮೆಣಸಿನ ಹುಡಿ ಹಾಕಿದ ದುಷ್ಕರ್ಮಿಗಳು!
x.com/nakkheeranweb
ಲಕ್ನೋ: ಇಬ್ಬರು ಪುರುಷರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ, ಗುಪ್ತಾಂಗಕ್ಕೆ ಕೋಲು ಮತ್ತು ಮೆಣಸಿನಪುಡಿಯನ್ನು ಹಾಕಿದ ಪೈಶಾಚಿಕ ಕೃತ್ಯದ ಬಗ್ಗೆ ಉತ್ತರ ಪ್ರದೇಶದ ಜಲೂನ್ ನ ನರ್ಸ್ ಒಬ್ಬರು ದೂರು ನೀಡಿದ್ದಾರೆ.
ಆದರೆ ಪೊಲೀಸರು ಭಿನ್ನ ಹೇಳಿಕೆ ನೀಡಿದ್ದು, ಮಹಿಳೆ ಮತ್ತೊಬ್ಬನ ಜತೆ ಪ್ರೇಮಸಂಬಂಧ ಹೊಂದಿದ್ದು, ಆ ವ್ಯಕ್ತಿ ಹಾಗೂ ಕುಟುಂಬದ ಸದಸ್ಯರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿವರಿಸಿದ್ದಾರೆ. ಮಹಿಳೆ ಕೆಲ ಗಂಭೀರ ಆರೋಪಗಳನ್ನು ಕೂಡಾ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಿಳೆ ಚುರ್ಖಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಸ್ಕೂಟರ್ ನಲ್ಲಿ ಗುರುವಾರ ಮುಂಜಾನೆ ಆಸ್ಪತ್ರೆಗೆ ತೆರಳುತ್ತಿದ್ದಾಗ, ಕೆಲವರು ನಿಲ್ಲಿಸಿ ಪೊದೆಯತ್ತ ಎಳೆದೊಯ್ದರು ಎಂದು ಸಂತ್ರಸ್ತೆಯ ಪತಿ ದೂರಿದ್ದಾರೆ.
"ಆಕೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ತಿಳಿಸಿದಳು. ಒಬ್ಬ ವ್ಯಕ್ತಿ, ಆತನ ಅಳಿಯ ಹಾಗೂ ಇತರ ಕೆಲವರು ಅಮಾನುಷವಾಗಿ ಥಳಿಸಿದರು. ನಾಲ್ಕು ಮಂದಿ ಬಲವಂತವಾಗಿ ಹಿಡಿದುಕೊಂಡು, ಇಬ್ಬರು ಸಾಮೂಹಿತ ಅತ್ಯಾಚಾರ ಎಸಗಿದರು. ಆಕೆಯ ಗುಪ್ತಾಂಗಕ್ಕೆ ಕೋಲು ಮತ್ತು ಮೆಣಸಿನ ಪುಡಿ ಹಾಕಲಾಗಿದೆ. ಪೊಲೀಸರು ಆಕೆಯನ್ನು ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದಾರೆ" ಎಂದು ವಿವರಿಸಿದ್ದಾರೆ.
ಹೆಚ್ಚುವರಿ ಎಸ್ಪಿ ಪ್ರದೀಪ್ ಕುಮಾರ್ ವರ್ಮಾ ಮತ್ತು ತಂಡ, ಮಹಿಳೆಯನ್ನು ಅಮಾನುಷವಾಗಿ ಥಳಿಸಿದ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಆಸ್ಪತ್ರೆಗೆ ಕರೆದೊಯ್ದರು.
"ಮಹಿಳೆ ಅದೇ ಗ್ರಾಮದ ಒಬ್ಬ ವ್ಯಕ್ತಿಯ ಜತೆ ಪ್ರೇಮಸಂಬಂಧ ಹೊಂದಿದ್ದಳು. ಆ ವ್ಯಕ್ತಿ ಹಾಗೂ ಕುಟುಂಬದವರು ಆಕೆಯನ್ನು ಥಳಿಸಿದ್ದಾರೆ. ಪೊಲೀಸ್ ತಂಡ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದೆ. ಕೆಲ ಗಂಭೀರ ಆರೋಪಗಳನ್ನು ಆಕೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.