ಮಧ್ಯಪ್ರದೇಶ | ಹಿಂದುಳಿದ ವರ್ಗದ ಯುವಕನಿಗೆ ಬ್ರಾಹ್ಮಣ ವ್ಯಕ್ತಿಯ ಪಾದ ತೊಳೆದು ನೀರು ಕುಡಿಯುವಂತೆ ಬಲವಂತ!

Photo | ndtv
ಭೋಪಾಲ್, ಅ. 12: ಪರ್ಷೋತ್ತಮ್ ಕುಶ್ವಾಹ ಎಂಬ ಯುವಕನಿಗೆ ಬ್ರಾಹ್ಮಣ ಸಮುದಾಯದ ಅನ್ನು ಪಾಂಡೆ ಎಂಬಾತನ ಪಾದ ತೊಳೆದು ಗ್ರಾಮಸ್ಥರ ಮುಂದೆ ನೀರು ಕುಡಿಯುವಂತೆ ಒತ್ತಾಯಿಸಿದ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಸತಾರಿಯಾ ಗ್ರಾಮದಲ್ಲಿ ನಡೆದಿದೆ.
ಅವಮಾನ ಮಾಡಿದ್ದಕ್ಕೆ ಶಿಕ್ಷೆಯಾಗಿ ಒಬಿಸಿ ಸಮುದಾಯದ ಯುವಕನೊಬ್ಬನನ್ನು ಬ್ರಾಹ್ಮಣ ವ್ಯಕ್ತಿಯ ಪಾದ ತೊಳೆದು ಆ ನೀರನ್ನು ಕುಡಿಯುವಂತೆ ಬಲವಂತಪಡಿಸಲಾಗಿರುವ ಜಾತಿ ಆಧಾರಿತ ತಾರತಮ್ಯದ ಘಟನೆಗೆ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಅಲ್ಲದೇ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಗೆ 5,100 ರೂ. ದಂಡ ವಿಧಿಸಿ, ಬ್ರಾಹ್ಮಣ ಸಮುದಾಯದ ಎದುರು ಕ್ಷಮೆಯಾಚಿಸುವಂತೆ ಬಲವಂತಪಡಿಸಲಾಗಿದೆ.
ಮದ್ಯ ನಿಷೇಧಿತ ಪ್ರದೇಶ ಸತಾರಿಯಾ ಗ್ರಾಮದಲ್ಲಿ ಅನ್ನು ಪಾಂಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮ ಸಭೆಯಲ್ಲಿ ಪಾಂಡೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ 2,100 ರೂ.ದಂಡ ವಿಧಿಸಲಾಗಿತ್ತು.
ಆದರೆ, ಪರ್ಷೋತ್ತಮ್ ಅವರು ಪಾಂಡೆಗೆ ಶೂಗಳ ಹಾರ ಧರಿಸಿರುವ AI-ರಚಿತ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ವಿವಾದ ತೀವ್ರಗೊಂಡಿತು. ಪರ್ಷೋತ್ತಮ್ ಅವರು ತಕ್ಷಣವೇ ಪೋಸ್ಟ್ ಅಳಿಸಿ ಕ್ಷಮೆಯಾಚಿಸಿದರೂ, ಕೆಲವರು ಇದನ್ನು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅವಮಾನವೆಂದು ಆರೋಪಿಸಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ನಂತರ ಬ್ರಾಹ್ಮಣ ಸಮುದಾಯದ ಕೆಲವು ಸದಸ್ಯರು ಪರ್ಷೋತ್ತಮ್ ಅವರಿಂದ “ಪ್ರಾಯಶ್ಚಿತ್ತ” ಮಾಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದು ವಿವಾದದ ಸ್ವರೂಪ ಪಡೆದುಕೊಂಡ ಪರಿಣಾಮ ಪರ್ಷೋತ್ತಮ್ ಅವರು ಪಾಂಡೆಯ ಪಾದ ತೊಳೆದು ಆ ನೀರನ್ನು ಕುಡಿಯುವಂತಹ ಅವಮಾನಕರ ಕೃತ್ಯ ಮಾಡಬೇಕಾಗಿ ಬಂತು. ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ವ್ಯಾಪಕವಾಗಿ ಖಂಡನೆಗೆ ಗುರಿಯಾದವು.
ವೀಡಿಯೊ ವೈರಲ್ ಆದ ನಂತರ ಇಬ್ಬರೂ ಘಟನೆಯನ್ನು ಶಮನಗೊಳಿಸಲು ಮುಂದಾಗಿದ್ದಾರೆ. “ನಾನು ತಪ್ಪು ಮಾಡಿದ್ದೇನೆ, ಕ್ಷಮೆಯಾಚಿಸಿದ್ದೇನೆ. ಅನ್ನು ಪಾಂಡೆ ನನ್ನ ಕುಟುಂಬದ ಗುರು. ಈ ವಿಷಯವನ್ನು ರಾಜಕೀಯಗೊಳಿಸಬೇಡಿ,” ಎಂದು ಪರ್ಷೋತ್ತಮ್ ವೀಡಿಯೊ ಮನವಿಯಲ್ಲಿ ತಿಳಿಸಿದ್ದಾರೆ.
“ಇದು ನಮ್ಮ ವಿಚಾರ. ಕೆಲವರು ಇದನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ನಡುವೆ ಗುರು-ಶಿಷ್ಯ ಸಂಬಂಧವಿದೆ” ಎಂದು ಅನ್ನು ಪಾಂಡೆ ಕೂಡ ಸ್ಪಷ್ಟಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







